ಕಾಫಿ ಕುಡಿಯುತ್ತಿದ್ದ ವ್ಯಕ್ತಿ ಜೇಬಿಗೆ ಕತ್ತರಿ ಹಾಕಿ 2 ಲಕ್ಷ ಕಳವು: 24 ಗಂಟೆಯಲ್ಲಿ ಖದೀಮರ ಬಂಧನ
ಮೈಸೂರು

ಕಾಫಿ ಕುಡಿಯುತ್ತಿದ್ದ ವ್ಯಕ್ತಿ ಜೇಬಿಗೆ ಕತ್ತರಿ ಹಾಕಿ 2 ಲಕ್ಷ ಕಳವು: 24 ಗಂಟೆಯಲ್ಲಿ ಖದೀಮರ ಬಂಧನ

July 18, 2019

ಮೈಸೂರು,ಜು.17(ಎಂಕೆ)-ಕಾಫಿ ಕುಡಿಯುತ್ತಿದ್ದ ವ್ಯಕ್ತಿಯ ಪ್ಯಾಂಟ್ ಜೇಬನ್ನು ಬ್ಲೇಡ್‍ನಿಂದ ಕತ್ತರಿಸಿ 2 ಲಕ್ಷ ರೂ. ಎಗರಿಸಿದ್ದ ಖದೀಮರನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಲಷ್ಕರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಗೌಸಿಯಾನಗರದ ನಿವಾಸಿ ಅಕ್ರಂಖಾನ್ ಅಲಿಯಾಸ್ ಅಕ್ರಂ(42), ರಾಜೀವ್‍ನಗರ ನಿವಾಸಿ ಅಸ್ಗರ್ ಅಹ್ಮದ್(40) ಬಂಧಿತರು. ಇವರಿಬ್ಬರು ಜು.6 ರಂದು ಶ್ರೀರಂಗ ಪಟ್ಟಣದ ನಿವಾಸಿ ಮರೀಗೌಡ ಎಂಬುವರು ಚಿನ್ನ ಖರೀದಿಸಲು 2 ಲಕ್ಷ ಹಣದೊಂದಿಗೆ ಮೈಸೂರಿಗೆ ಬಂದಿದ್ದು, ಅಶೋಕ ರಸ್ತೆಯ ಕೋತಾಸ್ ಕಾಫಿ ಷಾಪ್‍ನಲ್ಲಿ ಕಾಫಿ ಕುಡಿಯುತ್ತಿದ್ದಾಗ ಜೇಬನ್ನು ಬ್ಲೇಡ್‍ನಿಂದ ಕತ್ತರಿಸಿ ಹಣವನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಮರೀಗೌಡ ಅವರು ಜು.16 ರಂದು ಲಷ್ಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಹಿಂದೆ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಕ್ರಂನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸ್ನೇಹಿತ ಅಸ್ಗರ್ ಅಹ್ಮದ್‍ನೊಂದಿಗೆ ಸೇರಿ ಹಣ ಕಳ್ಳತನಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ 1.20 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲಷ್ಕರ್ ಪೊಲೀಸ್ ಠಾಣೆ ಇನ್ಸ್‍ಸ್ಪೆಕ್ಟರ್ ಮುನಿಯಪ್ಪ, ಪಿಎಸ್‍ಐ ಪೂಜಾ, ಸಿಬ್ಬಂದಿ ಗಳಾದ ನರಸಿಂಹಮೂರ್ತಿ, ಪ್ರದೀಪ, ಲೋಕೇಶ್ ಮತ್ತು ಭೂಪಯ್ಯ ಭಾಗವಹಿಸಿದ್ದರು. ಈ ವೇಳೆ ಇನ್ಸ್‍ಸ್ಪೆಕ್ಟರ್ ಮುನಿಯಪ್ಪ ಅವರು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಸಾರ್ವಜನಿಕರು ಜೇಬಿನಲ್ಲಿ ಹೆಚ್ಚು ಹಣ ಇಟ್ಟುಕೊಳ್ಳದೆ ಆನ್‍ಲೈನ್ ಹಾಗೂ ಎಟಿಎಂ ಕಾರ್ಡು ಬಳಸಬೇಕು. ಲಕ್ಷಗಟ್ಟಲೇ ಹಣವನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಅಪಾಯ ಎದುರಾಗಬಹುದು ಎಂದು ಎಚ್ಚರಿಸಿದರು.

Translate »