ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ
ಮೈಸೂರು

ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ

January 8, 2020

 4 ಲಕ್ಷ ರೂ. ಬೆಲೆಯ 40 ಕೆಜಿ ಶ್ರೀಗಂಧ ವಶ  ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಮೈಸೂರು,ಜ.7(ಎಸ್‍ಪಿಎನ್)- ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಮೈಸೂರಿನ ಜೆಎಸ್‍ಎಸ್ ಮಠದ ಆವರಣದಲ್ಲಿ ಶ್ರೀಗಂಧ ಮರ ಕಳವು ಮಾಡಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮೂವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿ, 4 ಲಕ್ಷ ರೂ. ಮೌಲ್ಯದ 40 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಲೇಟ್ ಸುಬ್ರಹ್ಮಣ್ಯ ಅವರ ಪುತ್ರ ಸಂಪತ್ ಕುಮಾರ್ ಅಲಿಯಾಸ್ ಸಂಪತ್(32), ಬೊಂಬೂಬಜಾರ್ ಮೇದರ ಬ್ಲಾಕ್ ನಿವಾಸಿ ವರದರಾಜ್ ಅವರ ಪುತ್ರ ಪರಶುರಾಮ್ ಅಲಿಯಾಸ್ ರಾಮು(38), ಶಾಂತಿನಗರದ ಸೈಯದ್ ಬಾಬು ಅವರ ಪುತ್ರ ಸೈಯದ್ ರಹೀಬ್ ಅಲಿಯಾಸ್ ರಹೀಬ್(26) ಬಂಧಿತರು.

ಜ.7ರಂದು ಖಚಿತ ಮಾಹಿತಿ ಮೇರೆಗೆ ಕೆ.ಆರ್.ಠಾಣಾ ವ್ಯಾಪ್ತಿಯ ಗೌರಿಶಂಕರ ನಗರದ ಬಸ್ ನಿಲ್ದಾಣ ಬಳಿ ಕಾರ್ಯಾ ಚರಣೆ ನಡೆಸಿದ ಸಿಸಿಬಿ ಪೊಲೀಸರು, ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧದ ತುಂಡುಗಳನ್ನು ಇಟ್ಟುಕೊಂಡು ನಿಂತಿದ್ದ ಖದೀಮರನ್ನು ವಶಕ್ಕೆ ಪಡೆದಿದ್ದಾರೆ.

ಈ ಖದೀಮರನ್ನು ವಿಚಾರಣೆಗೆ ಒಳ ಪಡಿಸಿದಾಗ ಇತ್ತೀಚೆಗೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜೆಎಸ್‍ಎಸ್ ಮಠದ ಆವ ರಣದಲ್ಲಿ ಶ್ರೀಗಂಧದ ಮರ ಕಡಿದು ಹೊತ್ತೊಯ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಈ ಆರೋಪಿಗಳು ಶ್ರೀಗಂಧದ ಮರ ಕಳ್ಳತನದ ಹಳೆಯ ಪ್ರಕರಣಗಳಲ್ಲಿಯೂ ಜೈಲುಪಾಲಾಗಿದ್ದರು. ಇತ್ತೀಚೆಗೆ ಜಾಮೀ ನಿನ ಮೇಲೆ ಹೊರಬಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರ ವಿರುದ್ಧ ಮೈಸೂರು ಜಿಲ್ಲೆ ಹುಣಸೂರು ಗ್ರಾಮಾಂ ತರ ಠಾಣೆ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಖದೀ ಮರ ಸೆರೆಯಿಂದ ಮೈಸೂರು ಕೆ.ಆರ್. ಠಾಣಾ ವ್ಯಾಪ್ತಿಗೆ ಬರುವ ಒಂದು ಶ್ರೀಗಂ ಧದ ಮರ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ಸಿಸಿಬಿ ವಿಭಾಗದ ಎಸಿಪಿ ವಿ.ಮರಿಯಪ್ಪ ನೇತೃತ್ವದಲ್ಲಿ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಕಿರಣ್ ಕುಮಾರ್, ಎಎಸ್‍ಐ ಚಂದ್ರೇಗೌಡ, ಅಲೆಗ್ಸಾಂಡರ್ ಸಿಬ್ಬಂದಿಗಳಾದ ರಾಮ ಸ್ವಾಮಿ, ಯಾಕುಬ್ ಷರೀಫ್, ಎಂ.ಆರ್. ಗಣೇಶ್, ಶಿವರಾಜು, ಲಕ್ಷ್ಮೀಕಾಂತ, ಚಿಕ್ಕಣ್ಣ, ಆನಂದ, ಗೌತಮ್, ಶಿವಕುಮಾರ್ ಇದ್ದರು.

Translate »