ಮೈಸೂರು, ಸೆ.23- ನಗರದ ವೀಣೆಶೇಷಣ್ಣ ಭವನದ ಗಾನಭಾರತಿ ಸಭಾಂಗಣದಲ್ಲಿ 40ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ಯಶಸ್ವಿಯಾಗಿ ನಡೆಯಿತು. ಕಲಾವಿದರ ಸುಪ್ತ ಪ್ರತಿಭೆಯನ್ನು ಅನಾ ವರಣಗೊಳಿಸಲು ಆರ್ಟಿಕ್ಯುಲೇಟ್ ಟ್ರಸ್ಟ್ ಒಂದು ವೇದಿಕೆ ಯಾಗಿದೆ. ಜೂನ್ 2016ರಲ್ಲಿ ಪ್ರಾರಂಭ ವಾದ ಈ ವೇದಿಕೆ ಇಲ್ಲಿಯವರೆಗೆ 40 ನೃತ್ಯ ಮಹೋತ್ಸವಗಳ ಮೂಲಕ 250ಕ್ಕೂ ಅಧಿಕ ನೃತ್ಯ ಕಲಾವಿದರು ತಮ್ಮ ನಾಟ್ಯ ಪ್ರಾವೀಣ್ಯತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿದೆ. ಶಾಸ್ತ್ರೀಯ ನೃತ್ಯದ ಹೊರತಾಗಿ, ಜಾನಪದ ಶೈಲಿ ಹಾಗೂ ಇನ್ನಿತರ ಪ್ರಕಾರದ ಪ್ರದರ್ಶನಕ್ಕೂ ವೇದಿಕೆಯಾಗಿ ರೂಪುಗೊಂಡಿದೆ.
ಬೆಂಗಳೂರಿನ ಸಾಯಿ ಆಟ್ರ್ಸ್ ಇಂಟರ್‍ನ್ಯಾಷನಲ್‍ನ ನೃತ್ಯ ಕಲಾವಿದರಾದ ಶ್ವೇತ ವೆಂಕಟೇಶ್, ಕ್ಷಮಿತಾ ಶಾಸ್ತ್ರಿ, ಟಿ.ಎಸ್.ಶರತ್, ಎನ್.ಕಾರ್ನಾಡ್ ತಮ್ಮ ನೃತ್ಯ ಪ್ರದರ್ಶನ ಪ್ರಾರಂಭಿಸಿದರು. ತಮ್ಮ ಗುರು ಕರ್ನಾಟಕ ಕಲಾಶ್ರೀ ಡಾ.ಸುಪರ್ಣಾ ವೆಂಕಟೇಶ್‍ರವರ ನೃತ್ಯ ಸಂಯೋಜನೆಯಲ್ಲಿ ಇತ್ತು. ಲಾಲ್‍ಗುಡಿ ಜಿ.ಜಯರಾಂರವರ ತಮಿಳು ಕೃತಿ ಆಯ್ಕೆ ಮಾಡಿದ್ದರು. ‘ದೇವರ್ ಮುನಿವರ್ತೋಳಿನ್ ಪಾದ ಜಗನ್ನಾಥ್’ ಎಂಬ ಕೃತಿ ಇದಾಗಿತ್ತು.
ಕೊಲ್ಕತ್ತಾ ಡಾ.ಅರ್ಕೊದೇವ್ ಭಟ್ಟಾಚಾರ್ಯರವರು ಭರತನಾಟ್ಯ ಶೈಲಿಯಲ್ಲಿ ಮೂರು ನೃತ್ಯ ಪ್ರದರ್ಶಿಸಿದರು. ಇವು ರುಕ್ಮಿಣಿದೇವಿ ಅರುಂದಾಲೆಯವರ ಕೃತಿಯಾಗಿತ್ತು. ಜಯದೇವ ಕವಿಯ ಅಷ್ಠಪದಿ ‘ಹರಿ ರಿಹ ಮುಗ್ಧ ವಧು’ ಹಾಗೂ ಕನ್ನಡದ ಹರಿದಾಸ ಸಂಕೀರ್ತನೆ ‘ಜಗನ್ಮೋಹನನೆ ಕೃಷ್ಣ’ ಹಾಗೂ ತಮಿಳು ಕೃತಿ ‘’ಆನಂದ ತಟನ ಪ್ರಕಾಶಂ’ ಎಂಬ ಕೃತಿಗಳನ್ನು ನೃತ್ಯ ಪ್ರದರ್ಶಿಸಿದರು. ಬೆಂಗಳೂರಿನ ದೀಪಾ ಭಟ್ 2 ನೃತ್ಯ ಪ್ರದರ್ಶನಗಳ ಮೂಲಕ ಗಮನ ಸೆಳೆದರು. ವಿದ್ವಾನ್ ಕಾರ್ತಿಕ್ ಹೆಬ್ಬಾರ್ ಅವರ ಶಿವನ ಕೃತಿಯಾದ ‘ಈಶನೇ ಕೈಲಾಸನಾಥನೇ’ ಸುಮನಸ ರಂಜನಿ ಆದಿತಾಳದಲ್ಲಿ ಹಾಗೂ ಜಯಲಕ್ಷ್ಮಿ ಭಟ್‍ರವರ ಕೃತಿಯಾದ ‘’ನವರಸ ಲಲಿತೆ’ ಹಾಗೂ ‘’ನಾದ ನೃತ್ಯಪ್ರಿಯೆ ಜಗದೀಶ್ವರಿ’ ಮೂಲಕ ನವರಸಗಳನ್ನು ಅಭಿವ್ಯಕ್ತಗೊಳಿಸಿದರು. ಈ 40ನೇ ಆರ್ಟಿಕ್ಯುಲೇಟ್ ನೃತ್ಯೋತ್ಸವ ನಾಟ್ಯ ಪ್ರಿಯರ ಹಾಗೂ ಕಲಾರಸಿಕರ ಮೆಚ್ಚುಗೆ ಗಳಿಸಿತು.