ಮೈಸೂರು, ಜು. 3(ಆರ್‍ಕೆ)- ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಯದ ಎಪಿಎಂಸಿ ಯಾರ್ಡ್‍ನ 8 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿರುವ ಖದೀಮರು, ಆ ಪೈಕಿ 4 ಅಂಗಡಿಗಳಲ್ಲಿ ಸುಮಾರು 10,000 ರೂ. ಹಣ ಕಳವು ಮಾಡಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಮುಂಜಾನೆ 1.30ರ ನಂತರ ಕಾರ್ಯಾ ಚರಣೆ ನಡೆಸಿರುವ ಕಳ್ಳರು, ಸದಾಶಿವ ಟ್ರೇಡರ್ಸ್, ಹಿತೇಶ್ ಟ್ರೇಡರ್ಸ್, ಜೈ ಮಾತಾಜಿ ಎಂಟರ್‍ಪ್ರೈಸಸ್, ವೆಂಕಟೇಶ್ವರ ಟ್ರೇಡಿಂಗ್ ಕಾರ್ಪೊರೇಷನ್, ನವರತನ್ ಸ್ಪೈಸೀಸ್, ಈಶ್ವರಿ ಎಂಟರ್‍ಪ್ರೈಸಸ್, ನಂದೀಶ ಟ್ರೇಡರ್ಸ್ ಅಂಗಡಿಗಳ ಶೆಟರ್ ಅನ್ನು ಕಬ್ಬಿಣದ ರಾಡಿ ನಿಂದ ಮೀಟಿದ್ದಾರೆ. ಆ ಪೈಕಿ 4 ಅಂಗಡಿ ಗಳಲ್ಲಿ ಒಟ್ಟು ಸುಮಾರು 10,000 ರೂ. ನಗದಿನೊಂದಿಗೆ ಪರಾರಿಯಾಗಿದ್ದಾರೆ. ಉಳಿದ 4 ಅಂಗಡಿಗಳಲ್ಲಿ ಹಣ ಇಟ್ಟಿರಲಿಲ್ಲ ಎಂದು ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಬಾಗಿಲು ತೆಗೆಯಲು ಬಂದಾಗ ವಿಷಯ ತಿಳಿದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸಬ್ ಇನ್ಸ್‍ಪೆಕ್ಟರ್ ಜಯಪ್ರಕಾಶ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡರು. ಯಾರ್ಡ್‍ನಲ್ಲಿ ಅಳವಡಿಸಿರುವ ಸಿಸಿ ಫುಟೇಜ್‍ಗಳನ್ನು ಪಡೆದಿರುವ ಪೊಲೀಸರಿಗೆ ಮುಂಜಾನೆ 1.30 ಗಂಟೆ ನಂತರ 5ರಿಂದ 6 ಮಂದಿ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ. ಎಎಸೈ ಕ್ಷಮಾ ಅವರೂ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಜಿಲ್ಲಾ ಬೆರಳಚ್ಚು ಮುದ್ರೆ ಘಟಕ ಹಾಗೂ ಶ್ವಾನ ದಳದ ಸಿಬ್ಬಂದಿಗಳೂ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.