ಕಾಂಗ್ರೆಸ್ ಸೋಲಿಗೆ ಕಾರಣ ಕಂಡುಕೊಳ್ಳುವ ಪ್ರಯತ್ನ
ಮೈಸೂರು

ಕಾಂಗ್ರೆಸ್ ಸೋಲಿಗೆ ಕಾರಣ ಕಂಡುಕೊಳ್ಳುವ ಪ್ರಯತ್ನ

June 25, 2019

ಮೈಸೂರು,ಜೂ.24(ಆರ್‍ಕೆಬಿ)-ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರವೂ ಗೌಪ್ಯ ಸಭೆ ನಡೆಸಿ, ಈ ಭಾಗದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ಮುಂದುವರಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಇಂದೂ ಸಹ ವರುಣಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು ಸಭೆಯಲ್ಲಿ ನಡೆದ ಯಾವುದೇ ವಿಚಾರ ಮಾಧ್ಯಮ ಗಳಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿದ್ದಾರೆ.

ಸಭೆಯಲ್ಲಿ ಪ್ರತ್ಯೇಕವಾಗಿ ಮುಖಂಡರು, ಕಾರ್ಯಕರ್ತ ರನ್ನು ಕೊಠಡಿಗೆ ಕರೆದು, ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತಗಳು ಬರಲು ಕಾರಣವೇನು? ಎಂಬ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತಗಳು ಬಂದಿರುವುದರಿಂದ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರವಾದ್ದರಿಂದ ಇದು ಮುಂದೆ ಅವರ ಮೇಲೆ ಪ್ರತೀಕೂಲ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಈ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಕಾಂಗ್ರೆಸ್‍ನ ಕೆಲ ಮುಖಂಡರು ತಿಳಿಸಿದರು. ಒಟ್ಟಾರೆ ಮೈಸೂರು, ಚಾಮರಾಜನಗರ ಭಾಗದಲ್ಲಿ ತಮ್ಮ ವರ್ಚಸ್ಸು ಕ್ಷೀಣಿಸದಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ವಿಶೇಷ ಗಮನ ಹರಿಸಿದ್ದಾರೆ. ಮುಂದೆ ಪಕ್ಷವನ್ನು ಉತ್ತಮವಾಗಿ ಸಂಘಟಿಸುವ ನಿಟ್ಟಿನಲ್ಲಿ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಚಿಂತನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿದೆ.

Translate »