ಸಾಗರಕಟ್ಟೆ-ಕೆ.ಆರ್.ನಗರ ರಸ್ತೆ ಅಭಿವೃದ್ಧಿ, ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಸುಸಜ್ಜಿತ ಸಭಾಂಗಣ ಸೇರಿ 60 ಕೋಟಿ ಯೋಜನೆಗೆ ಅನುಮೋದನೆ
ಮೈಸೂರು

ಸಾಗರಕಟ್ಟೆ-ಕೆ.ಆರ್.ನಗರ ರಸ್ತೆ ಅಭಿವೃದ್ಧಿ, ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಸುಸಜ್ಜಿತ ಸಭಾಂಗಣ ಸೇರಿ 60 ಕೋಟಿ ಯೋಜನೆಗೆ ಅನುಮೋದನೆ

June 25, 2019

ಮೈಸೂರು,ಜೂ.24-ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ 60 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ವಿವಿಧ ಕಾಮ ಗಾರಿ ಕೈಗೊಳ್ಳಲು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅನುಮೋದಿಸಿದ್ದಾರೆ.

ಬಹು ವರ್ಷಗಳ ಬೇಡಿಕೆಯಾಗಿರುವ ಸಾಗರಕಟ್ಟೆ-ಕೆ.ಆರ್.ನಗರ ರಸ್ತೆ ಅಭಿವೃದ್ಧಿ, ನಡುವೆ ರಾಮೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಬ್ರಿಡ್ಜ್ ಕಾಮಗಾರಿಗೆ ಅನು ಮೋದನೆ ನೀಡಲಾಗಿದೆ. ಈ ರಸ್ತೆ ಅಭಿ ವೃದ್ಧಿಯಿಂದ ಮೈಸೂರು-ಕೆ.ಆರ್.ನಗರ ಪ್ರಯಾಣ ಮತ್ತಷ್ಟು ಸಮೀಪವಾಗಲಿದೆ. ಸದ್ಯ ಹುಣಸೂರು ಮುಖ್ಯರಸ್ತೆ, ಬಿಳಿಕೆರೆ ಮಾರ್ಗವಾಗಿ ಕೆ.ಆರ್.ನಗರಕ್ಕೆ ಸುಮಾರು 41 ಕಿ.ಮೀ ಕ್ರಮಿಸಬೇಕು. ಸಾಗರಕಟ್ಟೆ-ಕೆ.ಆರ್.ನಗರ ಹೆದ್ದಾರಿ ನಿರ್ಮಾಣದ ನಂತರ 16 ಕಿ.ಮೀ ಕಡಿಮೆಯಾಗಲಿದ್ದು, ಕೇವಲ ಅರ್ಧ ತಾಸಿನಲ್ಲಿ ಪ್ರಯಾಣಿಸಬಹುದು.

ಇಲವಾಲ-ಸಾಗರಕಟ್ಟೆ-ಕೆ.ಆರ್.ನಗರ ರಸ್ತೆಯಿಂದ ರಾಮೇನಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ 15 ಕೋಟಿ ರೂ., ಹುಣಸೂರು ತಾಲೂಕು ಹುಸೇನಪುರ ಗ್ರಾಮದ ಬಳಿ ಲಕ್ಷಣ ತೀರ್ಥ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾ ಣಕ್ಕೆ 9.50 ಕೋಟಿ ರೂ., ಹುಣಸೂರು ನಗರ ದಲ್ಲಿ ನೂತನ ಅತಿಥಿ ಗೃಹ ನಿರ್ಮಾಣಕ್ಕೆ 10 ಕೋಟಿ ರೂ., ಕೆ.ಆರ್.ನಗರ ತಾಲ್ಲೂಕು ಲಾಳನದೇವನಹಳ್ಳಿಯಿಂದ ಅರ್ಕೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ., ಮಂಜೂರು ಮಾಡಲಾಗಿದೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಆವರಣದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿ, ಸುಸಜ್ಜಿತ ಸಭಾಂಗಣ ನಿರ್ಮಾಣ, ಚಾಮುಂಡಿ ಅತಿಥಿ ಗೃಹ ಮತ್ತು ಲೋಕೋಪಯೋಗಿ ಇಲಾಖೆ ಅತಿಥಿ ಗೃಹಗಳ ರಿಪೇರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಸಚಿವ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಭೆಯಲ್ಲಿ ವಿಧಾನ ಪರಿಷತ್ ಸದ ಸ್ಯರು, ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ತಿಪ್ಪೇಸ್ವಾಮಿ, ಇಲಾಖಾ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಕೆಆರ್‍ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ರಾಜ್ಯದ ಎಲ್ಲಾ ಮುಖ್ಯ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್‍ಗಳು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
ಜಿಟಿಡಿ ಪ್ರಯತ್ನದ ಫಲ ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಹೆದ್ದಾರಿ ನಿರ್ಮಿಸಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಹಾಲಿ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರಯತ್ನ ಪ್ರಮುಖವಾದ್ದದ್ದು. ಇವರು ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹೇರಿದ್ದರ ಫಲವಾಗಿ ಸಾಗರಕಟ್ಟೆ ಸೇತುವೆ ನಿರ್ಮಾಣವಾಗಿದ್ದರೂ ಹೆದ್ದಾರಿ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಹಾಗಾಗಿ ಈ ಕಾಮಗಾರಿಗೆ ಅನುದಾನ ಮಂಜೂರು ಮಾಡುವಂತೆ ಜಿಟಿಡಿ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಿದ್ದರು. ಈ ಹಿಂದೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನೂ ಸ್ಥಳಕ್ಕೆ ಕರೆದೊಯ್ದು ಕಾಮಗಾರಿ ಅಗತ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದರು. ಪಟ್ಟುಬಿಡದೆ ಉಂಡುವಾಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದ ಮಾದರಿಯಲ್ಲೇ ಸಾಗರಕಟ್ಟೆ-ಕೆ.ಆರ್.ನಗರ ಹೆದ್ದಾರಿಗೂ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »