ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ ಅಪಘಾತ: 18 ಮಂದಿಗೆ ಗಾಯಚಾಲಕನ ಅಜಾಗರೂಕ ಚಾಲನೆ ಆರೋಪ
ಮೈಸೂರು

ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ ಅಪಘಾತ: 18 ಮಂದಿಗೆ ಗಾಯಚಾಲಕನ ಅಜಾಗರೂಕ ಚಾಲನೆ ಆರೋಪ

May 7, 2019

ಮೈಸೂರು: ಗಾರ್ಮೆಂಟ್ ಕಾರ್ಮಿಕರಿದ್ದ ಆಟೋ, ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಗೋಬಿ, ಪಾನಿಪುರಿ ಗಾಡಿ ಹಾಗೂ 2 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರಿನ ಹೂಟಗಳ್ಳಿ ಬಳಿ ನಡೆದಿದೆ. ಸೋಮವಾರ ಸಂಜೆ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ ವೊಂದರ ಕಾರ್ಮಿಕರಿದ್ದ ಪ್ಯಾಸೆಂಜರ್ ಆಟೋ, ಕೆಆರ್‍ಎಸ್ ರಸ್ತೆಯಲ್ಲಿ ಹೋಗುತ್ತಿ ದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಈ ಘಟನೆ ನಡೆದಿದೆ.

ಘಟನೆಯಲ್ಲಿ ಆಟೋದಲ್ಲಿದ್ದ ಕಾರ್ಮಿಕರು, ಗೋಬಿ ಹಾಗೂ ಪಾನಿಪುರಿ ಗಾಡಿ ಬಳಿಯಿದ್ದವರು ಹಾಗೂ ದ್ವಿಚಕ್ರ ವಾಹನ ಸವಾರರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಿಗೆ ಹೂಟಗಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತೊಂದು ಮೂಲದ ಮಾಹಿತಿಯಂತೆ ಹೂಟಗಳ್ಳಿಯಿಂದ ಕೆಆರ್‍ಎಸ್ ರಸ್ತೆಯಲ್ಲಿ ಸಾಗುತ್ತಿದ್ದ ಆಟೋ, ಚಾಲಕನ ಅಜಾಗರೂಕತೆಯಿಂದ ಪಲ್ಟಿಯಾಗಿ, ರಸ್ತೆ ಪಕ್ಕದಲ್ಲಿದ್ದ ಗೋಬಿ, ಪಾನಿಪುರಿ ಅಂಗಡಿ ಹಾಗೂ ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿದೆ. ಘಟನೆ ಯಲ್ಲಿ ಸುಮಾರು 18 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮೂಳೆ ಮುರಿದಿರುವ ಓರ್ವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Translate »