ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಚಿನ್ನ ಗೆದ್ದ ಮೈಸೂರಿನ ವಿಕಲಚೇತನ
ಮೈಸೂರು

ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಚಿನ್ನ ಗೆದ್ದ ಮೈಸೂರಿನ ವಿಕಲಚೇತನ

May 7, 2019

ಮೈಸೂರು: ವಿಕಲಚೇತನ ಎಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂಬು ನೀಡುವಂತೆ ಮೈಸೂರಿನ ವ್ಯಕ್ತಿಯೊಬ್ಬರು ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವಿಕಲಚೇತನತೆ ಮೆಟ್ಟಿ ನಿಂತು ಆತ್ಮವಿಶ್ವಾಸದಿಂದ ಸಾಧನೆಗೈದ ಪ್ಯಾರಾ ಅಂತರರಾಷ್ಟ್ರೀಯ ಕ್ರೀಡಾಪಟು ಆರ್.ಮಂಜುನಾಥ್. ಇವರು 2019ರ ಏ.15-16ರಂದು ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾ ನಿಲಯದಲ್ಲಿ ನಡೆದ 3ನೇ ಎಟಿಟಿಎಫ್ ಅಂತರ ರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಮಂಜುನಾಥ್, ಜಾವ ಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಈ ಹಿಂದೆ 2004ರಲ್ಲಿ ಮಲೇಶಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಷಟಲ್ ಕಾಕ್‍ನಲ್ಲಿ 4ನೇ ಸ್ಥಾನ, 2017ರಲ್ಲಿ ನೇಪಾಳದಲ್ಲಿ ನಡೆದ ವಿಲ್ಲೊ ಕ್ರಿಕೆಟ್‍ನಲ್ಲಿ ದ್ವಿತೀಯ ಸ್ಥಾನ ಹಾಗೂ 2018ರಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಜಾವಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಸ್ಥಳೀಯ, ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆದ 3ನೇ ಎಟಿಟಿಎಫ್ ಅಂತರರಾಷ್ಟ್ರೀಯ ಪ್ಯಾರಾ ಗೇಮ್ಸ್‍ನಲ್ಲಿ ಜಯಪುರ, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಮತ್ತಿತರೆ ರಾಜ್ಯಗಳಿಂದ ಸುಮಾರು 80ಮಂದಿ ವಿಕಲಚೇತನರು ಭಾರತವನ್ನು ಪ್ರತಿನಿಧಿಸಿದ್ದು, ಮೈಸೂರು ಜಿಲ್ಲಾ ವಿಕಲಚೇತನರ ಒಕ್ಕೂಟದಿಂದ 6 ಮಂದಿ ಸ್ಪರ್ಧಿಸಿದ್ದರು.

Translate »