ಬೇಸಿಗೆ ಶಿಬಿರದ ಮಕ್ಕಳಿಂದ ಜಾಗೃತಿ ಜಾಥಾ
ಮೈಸೂರು

ಬೇಸಿಗೆ ಶಿಬಿರದ ಮಕ್ಕಳಿಂದ ಜಾಗೃತಿ ಜಾಥಾ

May 15, 2019

ಮೈಸೂರು: ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ಹಾಗೂ ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್ ಜಂಟಿ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆ ಮಕ್ಕಳು ಮಂಗಳವಾರ ಮೈಸೂರಿನಲ್ಲಿ ಮಕ್ಕಳ ಹಕ್ಕುಗಳು ಹಾಗೂ ಬಾಲ್ಯ ವಿವಾಹ ತಡೆಗಟ್ಟುವಿಕೆ ಕುರಿತು ಜಾಥಾ ನಡೆಸಿ, ಜಾಗೃತಿ ಮೂಡಿಸಿದರು.

ಬೇಸಿಗೆ ಶಿಬಿರದ ಮುಕ್ತಾಯದ ಅಂಗವಾಗಿ ನಡೆದ ಈ ಜಾಗೃತಿ ಜಾಥಾದಲ್ಲಿ ನೂರಾರು ಮಕ್ಕಳು ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದರು. `ಮಕ್ಕಳನ್ನು ಪಕ್ಷಿಯಂತೆ ಹಾರಲು ಬಿಡಿ…’, `ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ…’, `ಬದುಕುವ ಹಕ್ಕು… ರಕ್ಷಣೆಯ ಹಕ್ಕು.. ಅಭಿವೃದ್ಧಿ ಹೊಂದುವ ಹಕ್ಕು ಇವು ಮಕ್ಕಳ ಹಕ್ಕುಗಳು…’, `ಹೆಣ್ಣಿರಲಿ ಗಂಡಿರಲಿ ಮಕ್ಕಳನ್ನು ಸಮಾನತೆಯಿಂದ ಕಾಣಿ…’, `ಮಕ್ಕಳು ದುಡಿಮೆ ಬೇಡವೇ ಬೇಡ…’, `ಶಿಕ್ಷಣವೇ ಶಕ್ತಿ…’ ಸೇರಿದಂತೆ ಎಂಬಿತ್ಯಾದಿ ಜಾಗೃತಿ ಸಂದೇಶದ ಫಲಕಗಳ ನ್ನಿಡಿದು ಮಕ್ಕಳು ಜಾಗೃತಿ ಸಂದೇಶ ಸಾರಿದರು.

ಬನ್ನಿಮಂಟಪದ ಹೈವೇ ವೃತ್ತದ ಬಳಿಯ ಪುತ್ಥಲಿ ಉದ್ಯಾನವನದ ಎದುರಿನಿಂದ ಆರಂಭಗೊಂಡ ಜಾಥಾವು, ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಸಾಗಿ ಬಾಲಭವನದಲ್ಲಿ ಅಂತ್ಯ ಗೊಂಡಿತು. ಬಳಿಕ ಇಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಗಣ್ಯರು ಪಾಲ್ಗೊಂಡು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಇದೇ ವೇಳೆ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಿದ್ಧಪಡಿಸಿದ ಕಲಾಕೃತಿಗಳು ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರಕಲೆ, ತ್ಯಾಜ್ಯ ಸಾಮಾಗ್ರಿಗಳಿಂದ ಸಿದ್ಧಪಡಿಸಿದ ವಿವಿಧ ರೀತಿ ಕಲಾಕೃತಿಗಳು ಸೇರಿದಂತೆ ವಿಜ್ಞಾನ ಮಾದರಿಗಳ ಮೂಲಕ ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಮೈಸೂರು ನಗರ ಮತ್ತು ಜಿಲ್ಲೆ ಸೇರಿದಂತೆ 30 ಸ್ಥಳಗಳಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಪ್ರಯೋಜನ ಪಡೆದಿದ್ದಾರೆ. ಈ ಶಿಬಿರಗಳನ್ನು ನಡೆಸಲು ಸ್ಥಳೀಯ ಶಾಲೆ, ಗ್ರಾಮ ಪಂಚಾಯಿತಿ ಹಾಗೂ ಶಾಲೆಗಳ ಮೇಲುಸ್ತುವಾರಿ ಸಮಿತಿ ಸಹಕಾರ ನೀಡಿತು ಎಂದು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ಹಿರಿಯ ಕಾರ್ಯಕ್ರಮ ಅಧಿಕಾರಿ ವೆಂಕಟೇಶ್ ತಿಳಿಸಿದರು.

ಪಾಲಿಕೆ ಸದಸ್ಯ ರೇಷ್ಮಭಾನು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಪುಷ್ಪ, ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಶಿವರಾಮ್, ಮೈಸೂರು ಉತ್ತರ ವಲಯ ಬಿಇಓ ಡಿ.ಉದಯ್‍ಕುಮಾರ್, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಧನ್‍ರಾಜ್, ಮುಖ್ಯ ಶಿಕ್ಷಕ ದುಂಡಯ್ಯ ಮತ್ತಿತರರು ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »