ಮೈಸೂರಲ್ಲಿ ಆಕರ್ಷಕ ಜಾವಾ ಬೈಕ್ ರ್ಯಾಲಿ
ಮೈಸೂರು

ಮೈಸೂರಲ್ಲಿ ಆಕರ್ಷಕ ಜಾವಾ ಬೈಕ್ ರ್ಯಾಲಿ

July 15, 2019

ಮೈಸೂರು,ಜು.14(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಹಳೇ ಸುಂದರಿ ಜಾವಾ ಬೈಕ್‍ಗಳು ರಸ್ತೆಗಿಳಿದು ಬುರ-ಬುರನೆ ಸದ್ದು ಮಾಡಿ ಸಾರ್ವಜನಿಕ ಆಕರ್ಷಣೆಯ ಕೇಂದ್ರ ಬಿಂದುವಾದವು.

17ನೇ ಅಂತರರಾಷ್ಟ್ರೀಯ ಜಾವಾ ದಿನದ ಹಿನ್ನೆಲೆಯಲ್ಲಿ ಜಾವಾ ಬೈಕ್ ಪ್ರಿಯರು ಏಕ ಕಾಲಕ್ಕೆ 250ಕ್ಕೂ ಹೆಚ್ಚು ಜಾವಾ ಬೈಕ್‍ಗಳನ್ನು ರಸ್ತೆಗಿಳಿಸುವ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆದರು. ಸರಸ್ವತಿ ಪುರಂನಿಂದ ಆರಂಭವಾದ ಜಾವಾ ಬೈಕ್ ರ್ಯಾಲಿಯು ಬೋಗಾದಿ ರಸ್ತೆ, ಬಯಲು ರಂಗ ಮಂದಿರದ ರಸ್ತೆ, ವಿಶ್ವ ವಿದ್ಯಾನಿಲಯದ ಕ್ಯಾಂಪಸ್, ಹುಣಸೂರು ರಸ್ತೆ, ಒಂಟಿಕೊಪ್ಪಲು ಮೂಲಕ ಸಾಗಿ ಯಾದವಗಿರಿಯಲ್ಲಿರುವ ಜಾವಾ ಕಾರ್ಖಾನೆ ಇದ್ದ ಸ್ಥಳಕ್ಕೆ ತೆರಳಿದರು. ಬಳಿಕ ಕೆಲವು ಜಾವಾ ಬೈಕ್ ಸವಾರರು ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ಬಂದು ರ್ಯಾಲಿಯನ್ನು ಮುಕ್ತಾಯಗೊಳಿಸಿದರು.

ಬೈಕ್ ಜಾಥಾದಲ್ಲಿ 1946ರಿಂದ 1990 ರವರೆಗೆ ತಯಾರಾದ ಜಾವಾ ಬೈಕ್‍ಗಳು ತೆರಳಿದವು. ಇದರಲ್ಲಿ 50 ಸಿಸಿಯ ಜಾವಾ ಜೆಟ್, 125 ಸಿಸಿ ಸಿ-ಜೆಡ್ ಬೈಕ್, 175 ಸಿಸಿ, 250 ಸಿಸಿ ರೋಡ್ ಕಿಂಗ್, 350 ಸಿಸಿ ಯೆಜ್ಡಿ ಬೈಕ್‍ಗಳು ಸಂಚರಿಸಿ ಗಮನ ಸೆಳೆದವು.

ಈ ನಡುವೆ ಕೊಡಗು ಜಿಲ್ಲೆಯಲ್ಲಿಯೂ ಜಾವಾ ಮತ್ತು ಯೆಜ್ಡಿ ರೈಡರ್ಸ್‍ಗಳು ಜಾಥಾ ನಡೆಸಿ ಅಂತರರಾಷ್ಟ್ರೀಯ ಜಾವಾ ದಿನವನ್ನು ಆಚರಿಸಿದರು. ರೈಡರ್‍ಗಳಾದ ದಿಲೀಪ್, ಗಗನ್, ನಾಗೇಂದ್ರ, ಯಶ ವಂತ್, ನಿತ್ಯಾನಂದ, ಹರ್ಷ, ಪೃಥ್ವಿ, ಮೋಹನ್, ಸಚ್ಚಿನ್, ಪ್ರದೀಪ್ ಮತ್ತು ಋತ್ವಿಕ್ ಈ 12 ಜಾವಾ ರೈಡರ್ಸ್‍ಗಳು ಕೊಡಗಿನ ಚೆಲವಾರಾ ಜಲಪಾತ ಹಾಗೂ ಕಬ್ಬೆ ಬೆಟ್ಟಕ್ಕೆ ಜಾವಾ ಬೈಕ್‍ಗಳೊಂದಿಗೆ ತೆರಳಿ ಗಮನ ಸೆಳೆದರು.

Translate »