ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ
ಮಂಡ್ಯ

ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ

June 30, 2018

ಮಂಡ್ಯ: ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ತುಂಬು ಗರ್ಭಿಣಿಯರಿಗೆ ಮುತೈದೆಯರು ಸೀಮಂತ ಶಾಸ್ತ್ರ ಗಳನ್ನು ಮಾಡುತ್ತಿದ್ದರು. ಟೇಬಲ್ ಮೇಲೆ ಬಗೆಬಗೆಯ ಹಣ್ಣುಗಳನ್ನು ಇಡಲಾಗಿತ್ತು. ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ ಜನರು. ಇದು ಮನೆಯಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಶುಭ ಸಮಾರಂಭವಲ್ಲ. ಬದಲಾಗಿ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ದೃಶ್ಯ.

ಹೌದು. ಇತ್ತೀಚೆಗೆ ಪಾಂಡವಪುರದ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್‍ಐಗೆ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿ ದ್ದರು. ಅದರಂತೆ ಶುಕ್ರವಾರ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಇಬ್ಬರು ಮಹಿಳಾ ಕಾನ್‍ಸ್ಟೇಬಲ್‍ಗಳಾದ ಪ್ರೇಮ ಮತ್ತು ಶೃತಿ ಅವರಿಗೆ ಸೀಮಂತ ಕಾರ್ಯ ನೆರವೇರಿಸುವ ಮೂಲಕ ವಿಭಿನ್ನ ಕಾರ್ಯಕ್ರಮ ಆಚರಿಸಿದರು.

ಪೊಲೀಸರು ಯಾವಾಗಲೂ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕುಟುಂಬದೊಡನೆ ಸಂತಸದ ಕ್ಷಣವನ್ನು ಕಳೆಯಲೂ ಅವರಿಗೆ ಸಾಧ್ಯವಿಲ್ಲ ಎನ್ನುವ ಕಾಲದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಇಲಾಖೆ ಅಧಿಕಾರಿಗಳು ಸಹದ್ಯೋಗಿಗಳನ್ನು ಸಹೋದರಿಯರಂತೆ ಭಾವಿಸಿ ಸೀಮಂತ ಕಾರ್ಯ ಮಾಡಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮಳವಳ್ಳಿ ಠಾಣೆಯಲ್ಲಿ ಕೆಲಸ ಮಾಡೋ ಪ್ರೇಮ ಮತ್ತು ಶೃತಿ ಅವರಿಗೆ ಇದು ಚೊಚ್ಚಲ ಹೆರಿಗೆ ಆಗಿದ್ದು, ಎಲ್ಲರೂ ಅವರಿಗೆ ಧೈರ್ಯ ನೀಡಿದರು. ಬಳಿಕ, ಅರಿಶಿಣ, ಕುಂಕಮ ಕೊಟ್ಟು, ಮಡಿಲಕ್ಕಿ ತುಂಬಿ, ಹಣ್ಣನ್ನು ಕೊಟ್ಟು ಸೀಮಂತ ಮಾಡಲಾಯಿತು. ಈ ವೇಳೆ ನಿವೃತ್ತಿ ಯಾದ ನಿಂಗೇಗೌಡರನ್ನು ಅಭಿನಂದಿಸಲಾಯಿತು. ಡಿವೈಎಸ್‍ಪಿ ಮಲ್ಲಿಕ್, ಸಿಪಿಐಗಳಾದ ಗಂಗಾಧರ್, ಶ್ರೀಕಾಂತ್, ಪಿಎಸ್‍ಐ ಮಹದೇವು ಇದ್ದರು.

Translate »