ಮಕ್ಕಳಿಗೆ ಪಾಠಮಾಡದೆ ರಾಜಕಾರಣದಲ್ಲಿ ಶಿಕ್ಷಕರ ಕಾಲಹರಣ
ಮಂಡ್ಯ

ಮಕ್ಕಳಿಗೆ ಪಾಠಮಾಡದೆ ರಾಜಕಾರಣದಲ್ಲಿ ಶಿಕ್ಷಕರ ಕಾಲಹರಣ

June 30, 2018

ಮಂಡ್ಯ:  ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ರಾಜಕೀಯ ನಾಯಕರ ಜೊತೆ ತಿರುಗಾಡುತ್ತಾ ಕಾಲಹರಣ ಮಾಡುತ್ತಿ ರುವ ಶಿಕ್ಷಕರ ವಿರುದ್ಧ ತಾಪಂ ಸಭೆಯಲ್ಲಿಂದು ಆಕ್ರೋಶ ವ್ಯಕ್ತವಾಯಿತು.

ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ತಾಪಂ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಭೆಯಲ್ಲಿ ಮಾತನಾಡಿದ ಸದಸ್ಯ ಬೋರೇಗೌಡ, ಶಿಕ್ಷಕರು ಸಮರ್ಪಕ ವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಓಡಾಡಿ ಕೊಂಡಿರುತ್ತಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ವಲಯ ಬಿಇಓ ಶಿವಪ್ಪ, ಅಂಥ ಶಿಕ್ಷಕರು ಕಂಡು ಬಂದರೆ ಅಥವಾ ನೀವೇ ಖುದ್ದಾಗಿ ನಮಗೆ ದೂರು ನೀಡಿದರೆ, ಕೂಡಲೇ ಅವರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ತಾಲೂಕಿನಾದ್ಯಂತ ಇರುವ ಶಾಲೆಗಳಿಗೆ ನೇಮಕ ಮಾಡಿರುವ ಸಿಆರ್‍ಪಿ ಸಿಬ್ಬಂದಿ ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ.

ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಹಾಜರಾತಿ ಬಗ್ಗೆಯಾಗಲೀ, ಶಾಲೆಗಳ ಸಮಸ್ಯೆಗಳ ಬಗ್ಗೆಯಾಗಲೀ ಯಾವುದನ್ನು ಗಮನಿಸುತ್ತಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಮಂಜೇಗೌಡ ತಿಳಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶಿವಪ್ಪ ಹಾಗೂ ಮಂಜುನಾಥ್, 15 ಶಾಲೆಗಳಿಗೆ ಒಬ್ಬರಂತೆ ಸಿಆರ್‍ಪಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಅವರು ಕಟ್ಟುನಿ ಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಮುಂದಿನ ಜುಲೈ ತಿಂಗಳಲ್ಲಿ ದಕ್ಷಿಣ ಹಾಗೂ ಉತ್ತರ ವಲಯದ ಎಲ್ಲ ಸಿಆರ್‍ಪಿ ಸಿಬ್ಬಂದಿಗಳ ಸಭೆ ನಡೆಸಲಿದ್ದು, ಕಟ್ಟುನಿಟ್ಟಾಗಿ ಕರ್ತವ್ಯ ಪಾಲಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಕಳಪೆ ಬೇಳೆ ಸರಬರಾಜು ಆರೋಪ: ಬಿಸಿಯೂಟದ ಶಾಲೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಬೇಳೆ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಮಂಜೇಗೌಡ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಕ್ಷರ ದಾಸೋಹ ತಾಲೂಕು ಅಧಿಕಾರಿ ನಾರಾಯಣ್, ಎಲ್ಲ ಪದಾರ್ಥಗಳ ಗುಣಮಟ್ಟದ ಪರೀಕ್ಷೆ ನಂತರವೇ ಸರಬರಾಜು ಮಾಡಲಾಗುತ್ತಿದೆ. ಈ ಸಾಲಿನಲ್ಲಿ ಯಾವುದೇ ಟೆಂಡರ್ ದಾರರಿಗೆ ನೀಡಿಲ್ಲ. ನೇರವಾಗಿ ರೈತರಿಂದ ಖರೀದಿ ಮಾಡಿ ಶಾಲೆಗಳಿಗೆ ನಬಾರ್ಡ್ ವತಿಯಿಂದ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಂಜೇ ಗೌಡ, ನೀವು ಗುಣಮಟ್ಟದ ಬೇಳೆ ಸರಬ ರಾಜು ಮಾಡುತ್ತೀರಾ, ದಾಸ್ತಾನಿನಿಂದ ಶಾಲೆಗೆ ಹೋಗುವಷ್ಟರಲ್ಲಿ ಅದು ಕಳಪೆ ಗುಣಮಟ್ಟದ ಬೇಳೆಯಾಗಿ ಬದಲಾಗಿರುತ್ತದೆ. ಇದರ ಬಗ್ಗೆ ಗಮನ ಹರಿಸಿದ್ದೀರಾ?. ನಿಮ್ಮ ಕರ್ತವ್ಯವನ್ನು ಜವಾಬ್ದಾರಿ ನಿರ್ವಹಿಸಿ, ಸರಬರಾಜಾಗುವ ಆಹಾರ ಪದಾರ್ಥ ಗಳನ್ನು ಸ್ಥಳಕ್ಕೆ ಹೋಗಿ ಒಮ್ಮೆ ನೋಡಿ ಹೇಗಿರುತ್ತೆ. ಇಲ್ಲಿಯವರೆಗೂ ನೀವು ಯಾವ ಶಾಲೆಗೂ ಹೋಗಿ ಭೇಟಿ ಕೊಟ್ಟಿಲ್ಲ. ಅಲ್ಲಿ ಮಾಡುವ ಆಹಾರವನ್ನೊಮ್ಮೆ ತಿಂದು ನೋಡಿ ನಿಮಗೆ ಗೊತ್ತಾಗುತ್ತೆ ಎಂದು ಕಿಡಿಕಾರಿದರು.

ಸದಸ್ಯ ಶಿವಬೋರಯ್ಯ ಮಾತನಾಡಿ, ಮುಂದಿನ ಸಭೆಗೆ ಬಿಸಿಯೂಟ ಆಹಾರ ವನ್ನು ತರುತ್ತೇನೆ. ನೀವೇ ಪರಿಶೀಲಿಸಿ ಎಷ್ಟು ಕಳಪೆಯಾಗಿರುತ್ತದೆ ಎಂಬುದನ್ನು ಎಂದು ಸವಾಲು ಹಾಕಿದರು. ಇದಕ್ಕೆ ಅಧಿಕಾರಿ ನಾರಾಯಣ್ ಖಂಡಿತ, ಆ ರೀತಿ ಆಗಲು ಬಿಡುವುದಿಲ್ಲ. ಕ್ರಮ ವಹಿಸಲಾಗುವುದು ಎಂದು ಸಮಜಾ ಯಿಷಿ ನೀಡಿದರು.

ನಂತರ ವಿವಿಧ ಇಲಾಖೆಗಳ 2018-19ನೇ ಸಾಲಿನ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅನುಮೋದನೆ ನೀಡಲು ಕ್ರಮ ವಹಿಸಲಾಯಿತು. ತಾಪಂ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಕೇಶವಮೂರ್ತಿ ಇದ್ದರು.

Translate »