ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ
ಮೈಸೂರು

ಚರಂಡಿ ನೀರು ಹೊಂಡ; ವಿದ್ಯುತ್ ಕಂಬದಿಂದ ಅನಾಹುತ ಭೀತಿ

June 30, 2018
  • ಆತಂಕದಲ್ಲಿ ದಿನ ದೂಡುತ್ತಿರುವ ಯಲ್ಲಮ್ಮ ಕಾಲೋನಿ ನಿವಾಸಿಗಳು

ಮೈಸೂರು: ಸ್ವಚ್ಛ ನಗರ ಹೆಗ್ಗಳಿಕೆಗೆ ಪಾತ್ರವಾದ ಮೈಸೂರಿನ ಹಲವು ಬಡಾವಣೆಗಳಲ್ಲಿ ಸ್ವಚ್ಛ ನಗರಿ ಎಂಬ ಹೆಸರಿಗೆ ಅಪವಾದ ಎಂಬಂತೆ ಚರಂಡಿ, ರಸ್ತೆಗಳು ನಾರುತ್ತಿವೆ. ಇದ್ಯಾವುದೂ ಗೊತ್ತಿಲ್ಲದಂತೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಮೌನ ವಹಿಸಿದ್ದು, ಇದರಿಂದ ಆ ಪ್ರದೇಶದ ನಾಗರಿಕರು ರೋಗ ರುಜಿನಗಳ ಆತಂಕದಿಂದ ದಿನ ದೂಡುವಂತಾಗಿದೆ.

ಮೈಸೂರಿನ ಬನ್ನಿಮಂಟಪದ ಶ್ರೀನಿವಾಸ ಟಾಕೀಸ್ ಹಿಂಭಾಗದಲ್ಲಿರುವ ಬರೀ ಪರಿಶಿಷ್ಟರೇ ವಾಸಿಸುತ್ತಿರುವ ಯಲ್ಲಮ್ಮ ಕಾಲೋನಿಗೆ ಒಮ್ಮೆ ಭೇಟಿ ನೀಡಿದರೆ ಅಲ್ಲಿನ ನಿವಾಸಿಗಳು ಎಂಥಾ ದುರವಸ್ಥೆಯ ನಡುವೆ ವಾಸಿಸುತ್ತಿದ್ದಾರೆ ಎಂಬುದರ ಚಿತ್ರಣ ದೊರೆಯುತ್ತದೆ.

ಕಾಲೋನಿಯಲ್ಲಿರುವ ಯಾವುದೇ ಬಾಕ್ಸ್ ಚರಂಡಿಗಳನ್ನು ಸ್ವಚ್ಛ ಮಾಡಲಾಗಿಲ್ಲ. ಮಾಡಿದ್ದರೂ ಕಾಟಾಚಾರಕ್ಕೆ ಎಂಬಂತೆ ಮಾಡಿರುವುದು ಗೋಚರಿಸುತ್ತದೆ. ಕಾಲೋನಿಯ ಸುತ್ತ ಇರುವ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಚರಂಡಿ ನೀರು ಹರಿಯಲು ಅವಕಾಶವಾಗದಂತೆ ಚರಂಡಿಯನ್ನು ರಸ್ತೆ ಪಕ್ಕ ಮುಚ್ಚಲಾಗಿದೆ. ಇದರಿಂದಾಗಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ದುರ್ವಾಸನೆಯ ನಡುವೆಯೇ ಜನರು ಅನಿವಾರ್ಯವಾಗಿ ದಿನ ಕಳೆಯುವಂತಾಗಿದೆ.

ಸಾಲದೆಂಬಂತೆ ಚರಂಡಿಯ ಕೊಳಚೆ ನೀರು ರಸ್ತೆಯ ಮೇಲೆ ನಿಂತಿದ್ದು, ಚರಂಡಿ ನೀರಿನ ಮಧ್ಯದಲ್ಲಿ ವಿದ್ಯುತ್ ಕಂಬ ಯಾವುದೇ ಗಳಿಗೆಯಲ್ಲಿ ಬಿದ್ದು ಅನಾಹುತ ಸಂಭವಿಸುವಂತಿದೆ. ಇತ್ತ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವಾದರೆ, ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೂ ಇಲ್ಲಿ ಕಾಣಬರುತ್ತದೆ. ತಕ್ಷಣ ಚರಂಡಿ ದುರಸ್ತಿ ಮಾಡಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡದಿದ್ದರೆ ಕಾಲೋನಿಯ ನಿವಾಸಿಗಳಿಗೆ ನಾನಾ ರೋಗ ರುಜಿನಗಳು ಖಚಿತ. ಚರಂಡಿ ನೀರಿನ ತೇವದಿಂದ ಭೂಮಿ ಸಡಿಲವಾಗಿ ವಿದ್ಯುತ್ ಕಂಬ ಬಿದ್ದು ಅನಾಹುತ ಆಗುವ ಮುನ್ನ ಅಧಿಕಾರಿಗಳು ಗಮನ ಹರಿಸಿ ಸರಿಪಡಿಸಬೇಕು ಎಂದು ಯಲ್ಲಮ್ಮ ಕಾಲೋನಿಯ ಮುಖಂಡ ರಮೇಶ್.ಒತ್ತಾಯಿಸಿದ್ದಾರೆ.

Translate »