ಬೆಂಗಳೂರು, ಆ. 31(ಕೆಎಂಶಿ)- ಜೆಡಿಎಸ್ ಮುಖಂಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕರ್ನಾಟಕ ಸಹಕಾರಿ ಹಾಲು ಉತ್ಪಾ ದಕರ ಮಹಾಮಂಡಳಿ (ಕೆಎಂಎಫ್) ಅಧ್ಯಕ್ಷ ರಾಗುವ ಕನಸಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ತಣ್ಣೀರೆರಚಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಕೆಎಂಎಫ್ ಅಧ್ಯಕ್ಷರಾಗಲು ನಿರ್ದೇಶಕರನ್ನು ಬೆನ್ನ ಹಿಂದೆ ಕಟ್ಟಿಕೊಂಡು ತಿರುಗಿದ್ದ ರೇವಣ್ಣನಿಗೆ ಇಂದು ನಡೆದ ಚುನಾವಣೆಯಲ್ಲಿ ಆ ನಿರ್ದೇಶಕರೇ ನಿಲುವು ಬದಲಾಯಿಸಿದರು. ಅಧ್ಯಕ್ಷರಾಗಲು ಅನುಮೋದಕರು ಮತ್ತು ಸೂಚಕರು ಇಲ್ಲದಿರುವುದರಿಂದ ರೇವಣ್ಣ ನಾಮಪತ್ರ ಸಲ್ಲಿಸದ ಕಾರಣ ಮಾಜಿ ಸಚಿವ ಹಾಗೂ ಶಾಸಕ ಬಾಲಚಂದ್ರ ಜಾರಕಿ ಹೊಳಿ ಅವಿರೋಧವಾಗಿ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದರು. ಜಾರಕಿಹೊಳಿ ಒಬ್ಬರೇ ಚುನಾವಣಾಧಿಕಾರಿ ಮುಂದೆ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧವಾಗಿ ನಡೆಯಿತು. ಪ್ರಬಲ ಆಕಾಂಕ್ಷಿಯಾಗಿದ್ದ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕೂಡ ರೇವಣ್ಣ ಅವರಂತೆ ಜಾರಕಿಹೊಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೇ ವೇಳೆ ಬೆಂಗಳೂರು ಡೈರಿ ಅಧ್ಯಕ್ಷ ನರಸಿಂಹಮೂರ್ತಿ ಪ್ರತಿಕ್ರಿಯಿಸಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನದಂತೆ ನಾವೆಲ್ಲ ನಡೆಯುತ್ತಿದ್ದೇವೆ. ಸರ್ಕಾರ ಯಾವುದು ಇದೆಯೋ ಹಾಗೆಯೇ ಕೇಳಿ. ಸಂಸ್ಥೆಯ ಬೆಳವಣಿಗೆ ಮುಖ್ಯ ಎಂದು ಪಕ್ಷದಿಂದ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಂಬಲಿಸಿದ್ದೇವೆ ಎಂದು ಹೇಳಿದರು.
13 ಜನ ನಿರ್ದೇಶಕರು ಅವರ ಪರ ಇದ್ದೇವೆ. ಯಾವುದೇ ಆಮಿಷವನ್ನು ಬಿಜೆಪಿ ಒಡ್ಡಿಲ್ಲ. ಮಾರುತಿ ಕಾಶಂಪೂರ್, ಭೀಮಾನಾಯ್ಕ್, ರೇವಣ್ಣ ಮಾತ್ರ ಬೇರೆಯಾಗಿದ್ದಾರೆ. ಉಳಿದಂತೆ ಎಲ್ಲರೂ ಜಾರಕಿಹೊಳಿ ಪರ ಇದ್ದೇವೆ ಎಂದು ತಿಳಿಸಿದರು.