ಎರಡನೇ ದಿನವೂ ಇಡೀ ದಿನ ಡಿಕೆಶಿಗೆ ಇಡಿ ಡ್ರಿಲ್
ಮೈಸೂರು

ಎರಡನೇ ದಿನವೂ ಇಡೀ ದಿನ ಡಿಕೆಶಿಗೆ ಇಡಿ ಡ್ರಿಲ್

September 1, 2019

ನವದೆಹಲಿ, ಆ. 31- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು 2ನೇ ದಿನವಾದ ಶನಿವಾರವೂ ನಿರಂತರವಾಗಿ ವಿಚಾರಣೆ ನಡೆಸಿದರು. ಸೋಮವಾರ ಬೆಳಿಗ್ಗೆ 11 ಗಂಟೆಗೆ ಮತ್ತೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿ ಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ. ಸೋಮವಾರ ಗೌರಿ-ಗಣೇಶ ಹಬ್ಬವಿರುವ ಕಾರಣ ವಿಚಾರಣೆಗೆ ಹಾಜರಾಗುವು ದರಿಂದ ವಿನಾಯಿತಿ ನೀಡುವಂತೆ ಶಿವಕುಮಾರ್ ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಶುಕ್ರವಾರ ರಾತ್ರಿ ಇಡಿ ವಿಚಾರಣೆ ಮುಗಿಸಿ ದೆಹಲಿ ಯಲ್ಲಿರುವ ತಮ್ಮ ಸಹೋದರ, ಸಂಸದ ಡಿ.ಕೆ. ಸುರೇಶ್ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಶಿವಕುಮಾರ್, ಇಂದು ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿದರು. ಶುಕ್ರವಾರ ಬರಿಗೈಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಅವರು, ಇಂದು ಕೆಲವು ದಾಖಲೆಗಳೊಂದಿಗೆ ಇಡಿ ಕಚೇರಿಗೆ ತೆರಳಿದರು. ಇಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು, ಹಣಕ್ಕೆ ಸಂಬಂಧ ಪಟ್ಟಂತೆ ಡಿಕೆಶಿ ನೀಡಿದ ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ಈ ಮಧ್ಯೆ ಮಧ್ಯಾಹ್ನ 45 ನಿಮಿಷ ಕಾಲ ಡಿಕೆಶಿಗೆ ಊಟಕ್ಕಾಗಿ ಅವಕಾಶ ನೀಡಿದ್ದರು. ಆ ವೇಳೆ ಇಡಿ ಕಚೇರಿಯಿಂದ ಹೊರ ಬಂದ ಶಿವಕುಮಾರ್, ಇಡಿ ಕಚೇರಿ ಸಮೀಪದಲ್ಲೇ ಇದ್ದ ಹೋಟೆಲ್‍ವೊಂದರಲ್ಲಿ ಊಟ ಮಾಡಿ ಮತ್ತೆ ಇಡಿ ಕಚೇರಿಗೆ ತೆರಳಿದರು.

ರಾತ್ರಿ ವಿಚಾರಣೆ ಮುಗಿಸಿ ಹೊರಬಂದ ಡಿಕೆಶಿ ಸುದ್ದಿಗಾರರ ಜೊತೆ ಮಾತನಾಡಿ, ಬೆಳಿಗ್ಗೆ 11 ಗಂಟೆಯಿಂದ ಈವರೆಗೆ ವಿಚಾರಣೆ ನಡೆಸಿದ್ದಾರೆ. 45 ನಿಮಿಷ ಊಟಕ್ಕೆ ಬಿಟ್ಟಿದ್ದರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಮತ್ತೇ ಬರುವಂತೆ ಸಮನ್ಸ್ ಕೊಟ್ಟಿದ್ದಾರೆ. ಅಂದು ಗೌರಿ ಹಬ್ಬ. ನಮ್ಮ ಪದ್ಧತಿಯಂತೆ ಹಿರಿಯರಿಗೆ ಎಡೆಹಾಕಬೇಕು. ಆದ್ದರಿಂದ ವಿಚಾರಣೆಗೆ ಹಾಜ ರಾಗುವುದರಿಂದ ವಿನಾಯಿತಿ ಕೊಡಿ ಎಂದು ಮನವಿ ಮಾಡಿದೆ. ಆದರೆ, ಅವರು ವಿನಾಯಿತಿ ಕೊಡಲು ಆಗುವುದೇ ಇಲ್ಲ ಎಂದು ಹೇಳಿದ್ದಾರೆಂದು ಡಿಕೆಶಿ ಹೇಳಿದ್ದಾರೆ.

ಸೋಮವಾರ ವಿಚಾರಣೆಗೆ ಹಾಜರಾಗುತ್ತೀರಾ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಸಹನೆ ಕಳೆದುಕೊಂಡ ಡಿಕೆಶಿ, “ವಕೀಲರನ್ನು ಭೇಟಿ ಮಾಡಬೇಕೋ, ನೀವು ಹೇಳಿದ್ದು ಕೇಳಬೇಕೋ, ನಿಮ್ಮ ಪ್ರಶ್ನೆಗೆ ಉತ್ತರ ಕೊಡಬೇಕೋ? ಇನ್ನೇನು ಮಾಡಬೇಕು ನೀವೇ ಹೇಳಿ” ಎನ್ನುತ್ತಾ ತಮ್ಮ ಕಾರಿನತ್ತ ತೆರಳಿದರು.

Translate »