ದಸರಾ ವೆಬ್‍ಸೈಟ್, ಪೋಸ್ಟರ್ ಬಿಡುಗಡೆ
ಮೈಸೂರು

ದಸರಾ ವೆಬ್‍ಸೈಟ್, ಪೋಸ್ಟರ್ ಬಿಡುಗಡೆ

September 1, 2019

ಮೈಸೂರು, ಆ.31(ಆರ್‍ಕೆ)- ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಶಾಸಕ ಎಸ್.ಎ.ರಾಮದಾಸ್ ಅವರು ಇಂದು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ದಸರಾ ವೆಬ್‍ಸೈಟ್ ಹಾಗೂ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು.

2019ರ ಮೈಸೂರು ದಸರಾ ಮಹೋತ್ಸವ ಕುರಿತು ಎಲ್ಲಾ ಮಾಹಿತಿಗಳನ್ನು ಕನ್ನಡ, ಇಂಗ್ಲಿಷ್, ಅರೇಬಿಕ್, ಚೈನಿಸ್, ಡಚ್, ಫ್ರೆಂಚ್, ಜರ್ಮನ್, ಇಟಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪಾನಿಷ್ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಪ್ರವಾಸಿಗರಿಗೆ ವೆಬ್‍ಸೈಟ್‍ನಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಕಂಪ್ಯೂಟರ್, ಮೊಬೈಲ್, ಟ್ಯಾಬ್ ಕಂಪಾಟಿಬಲ್ ಮೂಲಕವೂ ದಸರಾ ವೆಬ್‍ಸೈಟ್ ತೆರೆದು ನೋಡ ಬಹುದಾಗಿದೆಯಲ್ಲದೆ, ಪುಷ್ ನೋಟಿಫಿಕೇಷನ್ ವ್ಯವಸ್ಥೆ ಹಾಗೂ ಅಲರ್ಟ್ ಸೌಲಭ್ಯ ಹೊಂದಿದೆ. ದಸರಾ ಕಾರ್ಯಕ್ರಮಗಳನ್ನು ಗೂಗಲ್ ಕ್ಯಾಲೆಂಡರ್ ಜೊತೆ ಇಂಟಿಗ್ರೇಟ್ ಮಾಡುವ ಅವಕಾಶ ನೀಡಿ ರುವುದರಿಂದ ತಮಗೆ ಬೇಕಾದ ಈವೆಂಟ್‍ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ‘ಮೈಸೂರು ದಸರಾ’ ಬಳಸಿ ದಸರಾ ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡ ಬಹುದು. ದಸರಾ ಟಿಕೆಟ್ ಖರೀದಿ, ಪ್ರಮುಖ ಕಾರ್ಯ ಕ್ರಮಗಳ ನೇರಪ್ರಸಾರ, ಅಭಿಪ್ರಾಯ, ಸಲಹೆ, ಮಾರ್ಗದರ್ಶನ ಹಂಚಿಕೊಳ್ಳಲು ವೆಬ್‍ಸೈಟ್‍ನಲ್ಲಿ ಪ್ರತ್ಯೇಕ ಪುಟವನ್ನು ಮೀಸಲಿರಿಸಲಾಗಿದೆ. ಮೈಸೂರು ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ-ಯಾತ್ರಾ ಸ್ಥಳಗಳ ಮಾಹಿತಿಯನ್ನೂ ದಸರಾ ವೆಬ್‍ಸೈಟ್ ‘www.mysoredasara.gov.in’ ನಲ್ಲಿ ಪಡೆಯಬಹುದಾಗಿದೆ. ವಿವಿಧ ಸರ್ಕಾರಿ ಇಲಾಖೆಗಳ ಜಾಲತಾಣಗಳಿಗೆ ಈ ವೆಬ್ ಅನ್ನು ಲಿಂಕ್ ಮಾಡಿರುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಂಪೂರ್ಣ ಮಾಹಿತಿ ಪಡೆಯಲು ಅನುಕೂಲವಾಗಿದೆ.

ಮನೆ ಮನೆ ದಸರಾ: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಎ.ರಾಮ ದಾಸ್ ಅವರು ಪರಿಚಯಿಸಿದ್ದ ಮನೆ-ಮನೆ ದಸರಾ ಕಲ್ಪನೆಯನ್ನು ಈ ಬಾರಿಯೂ ಜಾರಿಗೆ ತರಲಾಗುವುದು. ಜಿಲ್ಲಾ ಪಂಚಾಯಿತಿಯಿಂದ ತಾಲೂಕು ಕೇಂದ್ರಗಳಲ್ಲಿ ಗ್ರಾಮೀಣ ದಸರಾ, ದಸರಾ ಕ್ರೀಡಾಕೂಟಗಳನ್ನು ಈ ಬಾರಿಯೂ ಪರಿಣಾಮಕಾರಿಯಾಗಿ ಮುಂದು ವರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಿಶೇಷ ಸ್ತಬ್ದಚಿತ್ರ: ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ್ ಅಭಿಯಾನ’, ‘ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ’ ಸೇವೆ ಸೇರಿದಂತೆ ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ವಿಶಿಷ್ಟ ರೀತಿಯ ಸ್ತಬ್ದಚಿತ್ರ ಪ್ರದರ್ಶಿಸುವಂತೆ ತಾವು ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಓಗಳಿಗೆ ಸೂಚನೆ ನೀಡಿದ್ದೇನೆ ಎಂದೂ ಸಚಿವರು ಇದೇ ವೇಳೆ ನುಡಿದರು.

ಕಾಲ್‍ಸೆಂಟರ್: ಸೆಪ್ಟೆಂಬರ್ 5ರೊಳಗೆ ಮೈಸೂರು ಅರಮನೆ ಮಂಡಳಿ ಕಚೇರಿಯಲ್ಲಿ ದಸರಾ ಕಾಲ್‍ಸೆಂಟರ್ ತೆರೆಯಲಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸೆಂಟರ್‍ನಿಂದ ಸಾರ್ವಜನಿಕರು ಮಾಹಿತಿ ಪಡೆಯಬಹುದು ಎಂದು ಅವರು ನುಡಿದರು.

ಕಬಿನಿಗೆ ಬಾಗಿನ: ಬಿಜೆಪಿ ಸರ್ಕಾರ ರಚನೆಯಾದ ಬಳಿಕ ರಾಜ್ಯದ ಎಲ್ಲಾ ಕೆರೆ-ಕಟ್ಟೆ, ಜಲಾಶಯಗಳು ತುಂಬಿವೆ. ಸೆಪ್ಟೆಂಬರ್ 5ರೊಳಗಾಗಿ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರಿಕೊಳ್ಳಲಾಗುವುದು ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.

Translate »