ಮೈಸೂರು ರಾಜ ಮಾರ್ಗದಲ್ಲಿ ಸಚಿವ ಸೋಮಣ್ಣ ರೌಂಡ್ಸ್
ಮೈಸೂರು

ಮೈಸೂರು ರಾಜ ಮಾರ್ಗದಲ್ಲಿ ಸಚಿವ ಸೋಮಣ್ಣ ರೌಂಡ್ಸ್

September 1, 2019

ಮೈಸೂರು,ಆ.31(ಆರ್‍ಕೆ)-ದಸರಾ ಸಿದ್ಧತಾ ಕಾರ್ಯದಲ್ಲಿ ಸಕ್ರಿಯರಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಇಂದು ಬೆಳ್ಳಂಬೆಳಿಗ್ಗೆ ಮೈಸೂರಿನ ರಾಜಮಾರ್ಗದಲ್ಲಿ ಪಾದಯಾತ್ರೆ ನಡೆಸಿ, ಸ್ಥಿತಿ-ಗತಿಯನ್ನು ಪರಿಶೀಲಿಸಿದರು.

ಬೆಳಿಗ್ಗೆ 6.30ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂದಿನಿಂದ ಪಾದಯಾತ್ರೆ ಆರಂಭಿಸಿದ ಸೋಮಣ್ಣ, ಬೆಳಿಗ್ಗೆ 9.30ಕ್ಕೆ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ತಲುಪಿದರು. ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಪುಷ್ಟಲತಾ ಜಗನ್ನಾಥ್ ಹಾಗೂ ಉಪ ಮೇಯರ್ ಶಫಿ ಅಹ್ಮದ್ ಸಾಥ್ ನೀಡಿದರು.

ಡಸ್ಟ್‍ಬಿನ್ ಬದಲಿಸಿ: ಮುಖ್ಯಮಂತ್ರಿ ಗಳು ವಿಜಯದಶಮಿ ಮೆರವಣಿಗೆ ಯಂದು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿ ರುವ ಅರಮನೆ ಬಲರಾಮ ಗೇಟ್ ಎದುರಿನ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಒಡೆದು ಹೋಗಿರುವ ಕಾಂಕ್ರಿಟ್ ಡಸ್ಟ್‍ಬಿನ್ ತಕ್ಷ ಣವೇ ತೆರವು ಮಾಡಿ, ಹೊಸ ಡಸ್ಟ್‍ಬಿನ್ ಇಟ್ಟು, ಸುತ್ತಮುತ್ತ ಶುಚಿಯಾಗಿಡುವಂತೆ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರಿಗೆ ಸೂಚಿಸಿದರು.

ನಾಯಿ ಹಾವಳಿ: ಸಮೀಪವೇ ಇರುವ ಡಾ. ರಾಜ್‍ಕುಮಾರ್ ಪಾರ್ಕ್‍ಗೆ ತೆರಳಿ ಡಾ. ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸೋಮಣ್ಣರನ್ನು ಸಂಪರ್ಕಿಸಿದ ಅನ್ನಪೂರ್ಣ ಎಂಬುವರು, ಪಾರ್ಕ್‍ನಲ್ಲಿ ನಾಯಿಗಳ ಹಾವಳಿ ಇದ್ದು, ಸರಿಯಾಗಿ ನಿರ್ವಹಿಸದ ಕಾರಣ, ಕೆಲವರು ಅನೈತಿಕ ಚಟುವಟಿಕೆಗಳ ತಾಣವಾಗಿಸಿಕೊಂಡಿರು ವುದರಿಂದ ವಾಯುವಿಹಾರಿಗಳಿಗೆ ತೊಂದರೆಯಾಗಿದೆ ಎಂದು ದೂರಿದರು.

ಪಾಲಿಕೆ ತೋಟಗಾರಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಾಯಿಗಳ ಹಾವಳಿ ತಡೆಗಟ್ಟಿ, ಗಿಡಗಂಟಿ ತೆರವುಗೊಳಿಸಿ ಇಂದಿನಿಂದಲೇ ಸರಿಯಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ರಾಜಮಾರ್ಗ ಶಿಥಿಲ: ವಿಜಯದಶಮಿ ಮೆರವಣಿಗೆ ಸಾಗುವ ರಾಜಮಾರ್ಗದ ಇಕ್ಕೆಲಗಳ ಫುಟ್‍ಪಾತ್‍ನಲ್ಲಿ ಗುಂಡಿಗಳು, ಕಲ್ಲಿನ ಬ್ಯಾರಿಕೇಡ್ ಮುರಿದಿರುವುದು, ಕೆಲವೆಡೆ ಒಳಚರಂಡಿ ನೀರು ರಸ್ತೆಗೆ ಹರಿ ಯುತ್ತಿದ್ದುದನ್ನು ಕಂಡ ಸಚಿವರು ‘ಇದೇನ್ರಿ, ಇದೇನಾ ಸ್ವಚ್ಛ ನಗರಿ, ಇದೇನಾ ಸಾಂಸ್ಕøತಿಕ ನಗರಿ, ಸಣ್ಣ ರಿಪೇರಿ ಮಾಡಿ ಸಲು ಜಿಲ್ಲಾ ಮಂತ್ರಿ ಬರಬೇಕೇನಪ್ಪಾ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮುಂದಿನ ವಾರ ಮತ್ತೆ ಪರಿಶೀಲಿಸು ತ್ತೇನೆ. ಅಷ್ಟರಲ್ಲಿ ವ್ಯವಸ್ಥೆ ಸಂಪೂರ್ಣ ಸರಿಹೋಗಬೇಕು. ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಹಿಂಭಾಗದ ರಸ್ತೆಯನ್ನು ಮೆಟ್ಲಿಂಗ್ ಮಾಡಿ ಡಾಂಬರ್ ಹಾಕಿಸಿ ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಫುಟ್‍ಪಾತ್ ತೆರವು: ದಸರಾ ಕಾರ್ಯ ಕ್ರಮಗಳು ನಡೆಯುವುದರಿಂದ ಚಿಕ್ಕಗಡಿ ಯಾರದ ಸುತ್ತಮುತ್ತ ಹಾಗೂ ಸಯ್ಯಾಜಿ ರಾವ್ ರಸ್ತೆಯ ಫುಟ್‍ಪಾತ್ ಮೇಲಿನ ವ್ಯಾಪಾರಿಗಳನ್ನು ಪೊಲೀಸ್ ಭದ್ರತೆ ಪಡೆದು ತಕ್ಷಣವೇ ತೆರವುಗೊಳಿಸಿ ಎಂದು ಮೇಯರ್ ಹಾಗೂ ಪಾಲಿಕೆ ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ಒಣಗಿದ ರೆಂಬೆಗಳು: ಪ್ರತೀದಿನ ಲಕ್ಷಾಂತರ ವಾಹನಗಳು ಓಡಾಡುವ ಹಾಗೂ ವಿಜಯದಶಮಿ ಮೆರವಣಿಗೆ ಸಾಗುವ ಸಯ್ಯಾಜಿರಾವ್ ರಸ್ತೆಯ ಎರಡೂ ಕಡೆಗಳ ಮರದ ಒಣಗಿದ ರೆಂಬೆಗಳನ್ನು ಶೀಘ್ರವೇ ತೆರವುಗೊಳಿಸಿ ಸಂಭವಿಸಬಹುದಾದ ಅಪಾಯ ತಪ್ಪಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇ-ಟಾಯ್ಲೆಟ್: ದಸರೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುವುದ ರಿಂದ ಸ್ವಚ್ಛತೆ ಕಾಪಾಡಬೇಕು, ಅಲ್ಲಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಇ-ಟಾಯ್ಲೆಟ್ ಸೌಲಭ್ಯ ಒದಗಿಸಬೇಕು. 15 ದಿನದೊಳಗಾಗಿ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸುವಂತೆಯೂ ಸಚಿವರು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರಿಗೆ ಸಲಹೆ ನೀಡಿದರು.

ಎಡಿಸಿ ಬಿ.ಆರ್.ಪೂರ್ಣಿಮಾ, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಡಿಸಿಪಿ ಎಂ.ಮುತ್ತುರಾಜ್, ಸಂಚಾರ ಎಸಿಪಿ ಜಿ.ಎನ್.ಮೋಹನ್, ಜಿ.ಪಂ. ಸಿಇಓ ಕೆ.ಜ್ಯೋತಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಜಯಂತ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪರಿ ಶೀಲನೆ ವೇಳೆ ಹಾಜರಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಡಾ. ಬಿ.ಹೆಚ್. ಮಂಜು ನಾಥ್, ಮಾಜಿ ಮೇಯರ್ ಸಂದೇಶ್‍ಸ್ವಾಮಿ, ಕೇಬಲ್ ಮಹೇಶ್, ಬಿ.ಪಿ. ಮಂಜುನಾಥ್, ಮೈ.ವಿ. ರವಿಶಂಕರ್, ಯಶಸ್ವಿನಿ ಸೋಮಶೇಖರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಸಹ ಸಚಿವರೊಂದಿಗೆ ಹೆಜ್ಜೆ ಹಾಕಿದರು.

Translate »