ಮೈಸೂರು: ಕಿಡಿ ಗೇಡಿಗಳು ಹಚ್ಚಿದ ಕಿಡಿಗೆ ಹೊತ್ತಿ ಉರಿದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸ್ಥಿತಿ ಸುಧಾರಿಸುತ್ತಿದೆ. ಆದರೆ ವನ್ಯಜೀವಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬಂಡೀಪುರ ಹುಲಿ ಯೋಜನೆ ನೂತನ ನಿರ್ದೇಶಕ ಟಿ.ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಕಿ ದುರ್ಘಟನೆಯಿಂದಾಗಿ ಈ ಹಿಂದೆ ಪ್ರಭಾರ ನಿರ್ದೇಶಕರಾಗಿದ್ದ ಅಂಬಾಡಿ ಮಾದವ್ ಅವರ ಸ್ಥಾನಕ್ಕೆ ಬಂಡೀಪುರ ಹುಲಿ ಯೋಜನೆಗೆ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ಸರ್ಕಾರ ಟಿ.ಬಾಲಚಂದ್ರ ಅವರನ್ನು ನಿಯೋಜಿಸಿದೆ. ಅಧಿಕಾರ ಸ್ವೀಕರಿಸಿ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಹೊಸ ನಿರ್ದೇಶಕರು, ಬೇಸಿಗೆ ಇನ್ನೂ 70 ದಿನ ಮುಂದುವರೆಯಲಿದ್ದು, ಈ ಅವಧಿಯಲ್ಲಿ ವನ್ಯ ಸಂಪತ್ತಿನ ಸಂರ ಕ್ಷಣೆಗೆ ಶ್ರಮಿಸುವಂತೆ ಸೂಚಿಸಿದರು.
`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಬಾಲಚಂದ್ರ, ಕಿಡಿಗೇಡಿಗಳಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ಬಂಡೀ ಪುರ ಅರಣ್ಯ ಸಂಪೂರ್ಣ ಭಸ್ಮವಾಗಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಆದರೆ ವಾಸ್ತವವಾಗಿ ಕೆಲ ಪ್ರದೇಶಕ್ಕೆ ಮಾತ್ರ ಹಾನಿಯಾಗಿದೆ. ಮುಖ್ಯ ರಸ್ತೆಗೆ ಹೊಂದಿ ಕೊಂಡಂತಿರುವ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದರಿಂದ ಸಹಜವಾಗಿ ಜನರಲ್ಲಿ ಬಂಡೀಪುರ ಅರಣ್ಯವೇ ನಾಶ ವಾಗಿದೆ ಎಂಬ ಭಾವನೆ ಕಾಡುತ್ತಿದೆ. ಆದರೆ ವಾಸ್ತವವಾಗಿ ಸಂಪದ್ಭರಿತ ಕಾಡಿಗೆ ಯಾವುದೇ ಹಾನಿಯಾಗಿಲ್ಲ ಎಂದರು.
ಪ್ರಸಕ್ತ ಬೇಸಿಗೆ ಆರಂಭವಾಗಿ 35 ದಿನ ಕಳೆದಿದೆ. ಇನ್ನೂ 70 ದಿನ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗಿದೆ. ಇದಕ್ಕೆ ಇಲಾಖೆ ಸಿಬ್ಬಂದಿ ವನ್ಯ ಸಂಪತ್ತನ್ನು ಸಂರಕ್ಷಿಸಲು ಬದ್ಧರಾಗಿ, ಸೈನಿಕರಂತೆ ಹಗಲು-ರಾತ್ರಿ ಶ್ರಮಿ ಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು, ಕಾಡಂ ಚಿನ ಗ್ರಾಮಗಳ ನಿವಾಸಿಗಳ ಸಹಕಾರ ಅಗತ್ಯ ಗತ್ಯ. ಕಾಡಿನಲ್ಲಿ ಕೆಲಸ ಮಾಡುತ್ತಿರುವ ವಾಚರ್, ಗಾರ್ಡ್ ಸೇರಿದಂತೆ ಸಿಬ್ಬಂದಿ ಗಳಿಗೆ ಊಟ, ಔಷಧಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಸಿಬ್ಬಂದಿಗೆ ರಜೆ ರದ್ದುಗೊಳಿಸಲಾಗಿದೆ. ಕಾಡಿಗೆ ಬೆಂಕಿ ಹಾಕುವ ನೀಚ ಹಾಗೂ ವಿಕೃತ ಮನಸಿನ ಕಿಡಿಗೇಡಿ ಗಳಿಗೆ ಗ್ರಾಮಸ್ಥರೇ ಪಾಠ ಕಲಿಸಬೇಕು. ವನ್ಯ ಸಂಪತ್ತಿಗೆ ಹಾನಿಯುಂಟುಮಾಡು ವವರ ಬಗ್ಗೆ ಮಾಹಿತಿ ನೀಡಿ ಇಲಾಖೆಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಕ್ರಮ ರೂಪಿಸುವುದಾಗಿ ತಿಳಿಸಿದರು.
ಕ್ವಿಕ್ ರೆಸ್ಪಾನ್ಸ್ ಟೀಮ್: ದುರ್ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಫೈರ್ ವಾಚರ್, ಗಾರ್ಡ್ ಸೇರಿದಂತೆ ಬಂಡೀಪುರದ ಎಲ್ಲಾ ವಲಯದಲ್ಲಿಯೂ ಕ್ವಿಕ್ ರೆಸ್ಪಾನ್ಸ್ ಟೀಮ್ ಇರುವ ವಾಹನ ಸನ್ನದ್ಧಗೊಳಿಸಲಾಗಿದೆ. ಮೂರು ದೊಡ್ಡ ಹಾಗೂ 11 ಚಿಕ್ಕ ಅಗ್ನಿಶಾಮಕ ವಾಹನ ಗಳ ಬಳಸಿಕೊಳ್ಳಲಾಗಿದೆ ಎಂದರು.