ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ
ಮಂಡ್ಯ

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ

May 31, 2018

ಮಂಡ್ಯ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಯಶಸ್ವಿಯಾಗಿದ್ದು, ಗ್ರಾಹಕರು ಪರದಾಡುವಂತಾಯಿತು.

ಅಖಿಲ ಭಾರತ ಬ್ಯಾಂಕ್ ಯೂನಿಯನ್ ನೀಡಿದ್ದ ಇಂದಿನ ಬಂದ್ ಕರೆಗೆ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ಯಾಂಕುಗಳ ವಹಿವಾಟು ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್, ಕೋಟೆಕ್ ಮಹಿಂದ್ರ ಸೇರಿದಂತೆ ಸಹಕಾರಿ ಬ್ಯಾಂಕ್‍ಗಳು ಕೂಡ ಬಂದ್‍ಗೆ ಬೆಂಬಲ ನೀಡಿದ್ದವು.

ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು ಬಂದ್ ಆಗಿದ್ದ ಪರಿಣಾಮ ದಿನನಿತ್ಯದ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರಿತು. ಇಂದು ಬ್ಯಾಂಕ್ ಬಂದ್ ಆಗಲಿದೆ ಎಂಬುದನ್ನು ತಿಳಿಯದಿದ್ದ ಗ್ರಾಹಕರು ಎಂದಿನಂತೆ ಬ್ಯಾಂಕ್‍ಗೆ ಬಂದು ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಬ್ಯಾಂಕ್‍ನಲ್ಲಿ ಇಂದು ಮತ್ತು ನಾಳೆ ಬ್ಯಾಂಕ್ ಬಂದ್ ಆಗಿದೆ ಎಂಬ ಫಲಕಗಳನ್ನು ಕಂಡು ನಿರಾಸೆÉಯಿಂದ ವಾಪಸ್ ಆಗುತ್ತಿದ್ದುದು ಕಂಡು ಬಂತು.

ಎಟಿಎಂಗೆ ಮುಗಿಬಿದ್ದ ಗ್ರಾಹಕರು: ಬ್ಯಾಂಕ್ ವಹಿವಾಟುಗಳು ಸ್ಥಗಿತಗೊಂಡಿದ್ದ ರಿಂದ ಬಹುತೇಕ ಜನರು ಎಟಿಎಂ ಬಳಿ ದೌಡಾಯಿಸಿದ್ದರು. ಇಂದು ಮತ್ತು ನಾಳೆ 2 ದಿನಗಳ ಕಾಲ ಬ್ಯಾಂಕ್‍ನಲ್ಲಿ ಹಣ ಪಡೆಯಲು ಸಾಧ್ಯವಾಗದ ಕಾರಣ ದಿನನಿತ್ಯದ ವಹಿವಾಟುಗಳಿಗೆ ಹಣ ಪಡೆಯಲು ಗ್ರಾಹಕರು ಎಟಿಎಂನಲ್ಲಿ ಸರತಿಯಲ್ಲಿ ನಿಂತು ಹಣ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ನಾಳೆಯೂ ಮುಷ್ಕರ ಮುಂದುವರಿಯಲಿದ್ದು, ಸಾರ್ವಜನಿಕರಿಗೆ ಮತ್ತಷ್ಟು ಬಂದ್ ಬಿಸಿ ತಟ್ಟಲಿದೆ.

Translate »