ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ
ಮಂಡ್ಯ

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ

May 31, 2018

ಮಂಡ್ಯ: ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಜೂ.5 ರೊಳಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಪ್ಪದೇ ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗಳಲ್ಲಿ ಸಂಗ್ರಹ ವಾಗಿರುವ ಸಕ್ಕರೆಯನ್ನು ವಶಪಡಿಸಿ ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಪತ್ರಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಬಾರಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸ ಲಾಗಿದ್ದರೂ, ಕೆಲವು ಸಕ್ಕರೆ ಕಾರ್ಖಾನೆಗಳು ಹಣವನ್ನು ಬಾಕಿ ಉಳಿಸಿಕೊಂಡು ರೈತರ ನೆರವಿಗೆ ಬಾರದಿರುವುದು ವಿಷಾದನೀಯ ಎಂದರು.

ರೈತರ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಮಯಾವ ಕಾಶ ಕೇಳುತ್ತಿರುವುದು ಸಮಂಜಸವಲ್ಲ. ರೈತರು ಬಹಳ ಪರಿಶ್ರಮದಿಂದ ಕಷ್ಟದಲ್ಲಿ ಕಬ್ಬು ಬೆಳೆದು ಕಾರ್ಖಾನೆಗಳಿಗೆ ಸರಬರಾಜು ಮಾಡಿರುತ್ತಾರೆ. ರೈತರ ಸಹಾಯಕ್ಕೆ ಕಾರ್ಖಾನೆಗಳು ಮುಂದಾಗಬೇಕು ಎಂದ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ದಾಸ್ತಾನಿನ ಮಾಹಿತಿಯನ್ನು 2 ದಿನದೊಳಗೆ ನೀಡಬೇಕು. ಈಗಾಗಲೇ ನೀಡಿರುವ ಜೂ.5ರ ಗಡುವಿನೊಳಗೆ ಹಣ ಪಾವತಿಸಬೇಕು ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ 5000 ರಿಂದ 5500 ಹೆಕ್ಟೆರ್ ಪ್ರದೇಶದಷ್ಟು ಕಬ್ಬು ಬೆಳೆಗಳು ಕಟಾವಿಗೆ ಸಿದ್ಧವಿದ್ದು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮೇ 31 ರೊಳಗೆ ಕಬ್ಬು ನುರಿಯಲು ಸಿದ್ಧತೆ ಮಾಡಿ ಕೊಂಡಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡುವುದರ ಜೊತೆಯಲ್ಲಿ ಕಾರ್ಖಾನೆಗಳಲ್ಲಿ ಈ ಕುರಿತು ಮಾಹಿತಿ ಫಲಕವನ್ನು ಪ್ರದರ್ಶಿಸಲು ಕ್ರಮವಹಿಸ ಬೇಕು ಎಂದರು.

ಇದೇ ವೇಳೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣ, ಕೊಪ್ಪ ಸಕ್ಕರೆ ಕಾರ್ಖಾನೆ 5.18 ಕೋಟಿ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ 16.05 ಕೋಟಿ ಹಾಗೂ ಮೈಷುಗರ್ ಸಕ್ಕರೆ ಕಾರ್ಖಾನೆ 3.35 ಕೋಟಿ ಬಾಕಿ ಹಣವನ್ನು ರೈತರಿಗೆ ನೀಡಬೇಕು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟ ಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಪತ್ರಿನಿಧಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದರು.

Translate »