ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಿ: ಕೃಷಿ ಸಂಬಂಧಿಸಿದ ಸಭೆಯಲ್ಲಿ ಡಿಸಿ ಮಂಜುಶ್ರೀ ಸೂಚನೆ
ಮಂಡ್ಯ

ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಿ: ಕೃಷಿ ಸಂಬಂಧಿಸಿದ ಸಭೆಯಲ್ಲಿ ಡಿಸಿ ಮಂಜುಶ್ರೀ ಸೂಚನೆ

June 28, 2018

ಮಂಡ್ಯ: ‘ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕೆಯಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧ ವಾರ ಕೃಷಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ನೀರಿನ ಲಭ್ಯತೆ ಇರುವ ಕಾರಣ ಬಿತ್ತನೆ ಕಾರ್ಯವು ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಜುಲೈ ಮೊದಲ ವಾರದೊಳಗೆ ಜಿಲ್ಲೆಯ ರೈತರಿಗೆ ಅಗತ್ಯವಾದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೃಷಿ ಚಟುವಟಿಕೆಗೆ ದಾಸ್ತಾನು ಮಾಡುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳು, ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗಳಿಗೆ ಸರಬರಾಜಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಗುಣಮಟ್ಟದ ಹಾಗೂ ಸರಬರಾಜು ಕುರಿತು ರೈತರಿಂದ ಯಾವುದೇ ದೂರುಗಳು ಬರಬಾರದು. ತಾಲೂಕು ಹಂತದ ಸಮಸ್ಯೆಗಳನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸದೇ ಅಲ್ಲಿಯೇ ಪರಿಹರಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಪರವಾನಗಿ ಪಡೆದ 329 ಖಾಸಗಿ ಹಾಗೂ 228 ಸಹಕಾರಿ ರಸಗೊಬ್ಬರ ಚಿಲ್ಲರೆ ವ್ಯಾಪಾರಿ ಗಳು ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಅದರಲ್ಲಿ 465 ರಸ ಗೊಬ್ಬರ ಚಿಲ್ಲರೆ ವ್ಯಾಪಾರಿಗಳು ಮಾತ್ರ ಪೋಸ್‍ಯಂತ್ರ ಬಳಸುತ್ತಿರುವುದು ಕಂಡುಬಂದಿದೆ. ಉಳಿದ ರಸ ಗೊಬ್ಬರ ಚಿಲ್ಲರೆ ವ್ಯಾಪಾರಿಗಳು ಪೋಸ್‍ಯಂತ್ರ ಬಳಸದಿರುವ ಕಾರಣ ರಸಗೊಬ್ಬರ ದಾಸ್ತಾನು ಹಾಗೂ ಸರಬರಾಜಿನ ಬಗ್ಗೆ ಆನ್ ಲೈನ್‍ನಲ್ಲಿ ಮಾಹಿತಿ ಸರಿಯಾಗಿ ಬಿತ್ತರಿಸುತ್ತಿಲ್ಲ. ಈ ಕುರಿತು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಎರಡು ದಿನಗಳೊಳಗೆ, ಅಂತಹ ವ್ಯಾಪಾರಿಗಳೊಂದಿಗೆ ಚರ್ಚಿಸಿ ಪೋಸ್‍ಯಂತ್ರಕ್ಕೆ ಬದಲಾಯಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಗಳು ರೈತರಿಗೆ ಬೇಕಾಗುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಬಿತ್ತನೆ ಬೀಜಗಳ ಕೊರತೆಗೆ ಅವಕಾಶ ನೀಡಬಾರದು. ಬೇಡಿಕೆ ಬಂದ ನಂತರ ಕ್ರಮವಹಿ ಸುವ ಬದಲು, ಮುಂಚಿತವಾಗಿಯೇ ಬಿತ್ತನೆ ಬೀಜಗಳನ್ನು, ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳ ಬೇಕು. ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಸರಬ ರಾಜು ಮಾಡುವ ಮಟ್ಟಿಗೆ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಕೃಷಿ ಅಭಿಯಾನದಲ್ಲಿ ರೈತರಿಗೆ ಸಮಗ್ರ ಕೃಷಿ ಮಾಹಿತಿ, ಕೃಷಿ ವಸ್ತು ಪ್ರದರ್ಶನ ಹಾಗೂ ರೈತರೊಡನೆ ಸಂವಾದ ಕಾರ್ಯಕ್ರಮಗಳು ಇರುತ್ತದೆ. ಕಾರ್ಯಕ್ರಮದ ವೇಳಾಪಟ್ಟಿ ಯನ್ವಯ ಮುಂಚಿತವಾಗಿ ವ್ಯಾಪಕವಾದ ಪ್ರಚಾರ ಕೈಗೊಳ್ಳ ಬೇಕು. ಸವಲತ್ತುಗಳ ಸಾಂಕೇತಿಕ ವಿತರಣೆ, ಮಾದರಿ ರೈತ ಪ್ರಯತ್ನಗಳ ಅನುಭವ ಹಂಚಿಕೆ, ವಿಷಯ ತಜ್ಞರಿಂದ ನಿರ್ದಿಷ್ಟ ವಿಷಯ ಕುರಿತು ಕಿರು ಉಪನ್ಯಾಸ, ತಜ್ಞರೊಂದಿಗೆ ರೈತರ ಸಂವಾದ, ಹೊಸ ತಂತ್ರಜ್ಞಾನ ಪರಿಚಯ, ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ಕರಪತ್ರಗಳ ವಿತರಣೆ ನಡೆ ಯುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಜವಾಬ್ದಾರಿ ಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಯಾಂತ್ರೀಕರಣ ಹಾಗೂ ಕಳೆನಾಶಕಗಳ ಬಗ್ಗೆ ಪ್ರಚಾರ, ಪ್ರಮುಖ ಬೆಳೆಗಳಿಗೆ ತಗಲುವ ರೋಗ ಕೀಟಗಳ ಸಮಗ್ರ ನಿರ್ವಹಣೆ, ಹೊಸ ತಳಿಗಳನ್ನು ಕಿಟ್ ಮಾದರಿಗಳಲ್ಲಿ ರೈತರಿಗೆ ವಿತರಿಸಿ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಬೇಕು. ರೈತರಿಂದ ರೈತರಿಗೆ ಸಂವಾದ ಜೊತೆಗೆ ಪ್ರಗತಿಪರ ರೈತರು ಹಾಗೂ ರೈತ ಮುಖಂಡರ ನಡುವಣ ಪರಸ್ಪರ ಚರ್ಚೆಗೆ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಬೇಕು ಎಂದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಾ ಸುಲೋಚನಾ, ಉಪ ನಿರ್ದೇಶಕರಾದ ರವಿ, ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಜು ಹಾಜರಿದ್ದರು.

Translate »