ಏ.30ರಿಂದ ಛತ್ತೀಸ್‍ಗಡ್‍ನ ಬಿಲಾಯ್  ರಾಷ್ಟ್ರೀಯ ಪಂಜಕುಸ್ತಿಗೆ ಮೈಸೂರು ವಿಶೇಷ ಚೇತನ
ಮೈಸೂರು

ಏ.30ರಿಂದ ಛತ್ತೀಸ್‍ಗಡ್‍ನ ಬಿಲಾಯ್ ರಾಷ್ಟ್ರೀಯ ಪಂಜಕುಸ್ತಿಗೆ ಮೈಸೂರು ವಿಶೇಷ ಚೇತನ

February 21, 2019

ಮೈಸೂರು: ಕೆಲ ದಿನಗಳ ಹಿಂದಷ್ಟೆ ಉಡುಪಿಯಲ್ಲಿ ನಡೆದ ಪಂಜಕುಸ್ತಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದ ವಿಕಲಚೇತನನೋರ್ವ, ಛತ್ತೀಸ್ ಗಡ್‍ನ ಬಿಲಾಯ್‍ನಲ್ಲಿ ಏ.30ರಿಂದ ನಡೆಯುವ 43ನೇ ರಾಷ್ಟ್ರೀಯ ಪಂಜಕುಸ್ತಿ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸುತ್ತಿದ್ದು, ಇದಕ್ಕಾಗಿ ಕಸರತ್ತು ನಡೆಸುತ್ತಿದ್ದಾರೆ.

ಮೈಸೂರು ಕೆ.ಆರ್.ಮೊಹಲ್ಲಾದ ನಿವಾಸಿಯಾದ ಎಂ.ರಾಜು(30) ಪಂಜ ಕುಸ್ತಿಯಲ್ಲಿ ಭಾಗವಹಿಸುತ್ತಿದ್ದು, ಇವರು ಸ್ವಲ್ಪಮಟ್ಟಿನ ಕಿವುಡುತನ ಮತ್ತು ಮಾತಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಾ ವುದನ್ನು ಲೆಕ್ಕಿಸದೆ ಹಲವು ವರ್ಷಗ ಳಿಂದ ಕುಸ್ತಿಯಲ್ಲಿ ಸಾಧಿಸುವ ಛಲ ಹೊಂದಿರುವ ರಾಜು, ಸತತ 7 ಬಾರಿ `ಕರ್ನಾಟಕ ಭೀಮ ಪ್ರಶಸ್ತಿ’ಗೆ ಭಾಜನ ರಾಗಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ಟರ್ಕಿಯಲ್ಲಿ ನಡೆದ 21ನೇ ಪ್ಯಾರಾ ಆರ್ಮ್‍ವ್ರೆಸ್ಟ್ಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

2014ರ ರಾಜ್ಯ ದಸರಾ ಕ್ರೀಡಾ ಕೂಟದ 86 ಕೆ.ಜಿ.ವಿಭಾಗದ ಪಂಜ ಕುಸ್ತಿಯಲ್ಲಿ ಪ್ರಥಮ, 2017ರ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ನಡೆದ 3ನೇ ರಾಜ್ಯಮಟ್ಟದ ಪುರುಷರ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಂತೆಯೇ 2014ರಲ್ಲಿ ಪಂಜಕುಸ್ತಿ ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರು ಜಿಲ್ಲಾ ಆರ್ಮ್ ವ್ರೆಸ್ಟ್ಲಿಂಗ್ ಅಸೋಸಿಯೇಷನ್ ಮತ್ತು ವಂಶಿ ಫಿಟ್ನೆಸ್ ಜೋನ್ ಆಯೋಜಿಸಿದ್ದ ಕುಸ್ತಿಯಲ್ಲಿ ಪ್ರಥಮ, ಕರ್ನಾಟಕ ಪಂಜ ಕುಸ್ತಿ ಸಂಘದ ಅಡಿಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಸತತವಾಗಿ 2014 ರಿಂದ 2018 ರವರೆಗೂ ಜಯ ಸಾಧಿಸಿ `ಕರ್ನಾಟಕ ಭೀಮ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

2015ರಲ್ಲಿ ಕೇರಳದ ಪಂಜಕುಸ್ತಿ ಆಸೋಸಿಯೇಷನ್ ಆಯೋಜಿಸಿದ್ದ ಆರ್ಮ್ ವ್ರೆಸ್ಟ್ಲಿಂಗ್ ಚಾಂಪಿಯನ್‍ಶಿಪ್‍ನ 86 ಕೆಜಿ ವಿಭಾಗದಲ್ಲಿ ಪ್ರಥಮ, 2013ರಲ್ಲಿ ಕರ್ನಾಟಕ ಪಂಜ ಕುಸ್ತಿ ಸಂಘವು ಆಯೋ ಜಿಸಿದ್ದ 80 ಮತ್ತು 86 ಕೆ.ಜಿ ಎರಡೂ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿಯೂ ಪ್ರಥಮ ಸ್ಥಾನ ಗಳಿಸಿದ್ದಾರೆ. 2019ರ ಜ.16 ರಿಂದ ತೆಲಂಗಾಣ ಆರ್ಮ್‍ವ್ರೆಸ್ಟ್ಲಿಂಗ್ ಅಸೋಸಿಯೇಷನ್, ಇಂಡಿಯನ್ ಸ್ಟ್ರೆಂತ್ ಫಿಟ್ನೆಸ್ ಫೆಡರೇಷನ್ ಆಯೋಜಿಸಿದ್ದ ರಾಷ್ಟ್ರಮಟ್ಟದ ಆರ್ಮ್ ವ್ರೆಸ್ಟ್ಲಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಹಾಗೂ ಫೆ.13ರಂದು ಉಡುಪಿ ಜಿಲ್ಲಾ ಪಂಜಕುಸ್ತಿ ಸಂಘ ಆಯೋಜಿಸಿದ್ದ ಪಂಜಕುಸ್ತಿಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಕೈತಪ್ಪಿದ ಅವಕಾಶ: 2019ರ ಜನವರಿಯಲ್ಲಿ ಪಾಕಿಸ್ತಾನದಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಯಲ್ಲಿ ಭಾಗವಹಿಸುವ ಅವಕಾಶ ಲಭಿಸಿ ತ್ತಾದರೂ ಆರ್ಥಿಕ ಸಮಸ್ಯೆಯಿಂದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೆ, ಹಣಕಾಸಿನ ನೆರವಿಲ್ಲದೆ ಇಷ್ಟೆಲ್ಲಾ ಸಾಧನೆಗೈದಿರುವ ರಾಜು ಅವರಿಗೆ ಭಾರತವನ್ನು ಪ್ರತಿನಿಧಿಸಲು ಸಾಧ್ಯ ವಾಗಿಲ್ಲ.
ಮಾಸಿಕ ವೇತನ: ಬಹುಪಾಲು ಕಿವು ಡುತನ ಮತ್ತು ಸ್ಪಷ್ಟವಾಗಿ ಮಾತು ಬಾರದ ಸ್ಥಿತಿಯಲ್ಲಿರುವ ಎಂ.ರಾಜು ಅವರು ವಿಕಲಚೇತನರಾದ ಹಿನ್ನೆಲೆಯಲ್ಲಿ ಅವರಿಗೆ ಅಂಗವಿಕಲರ ವೇತನವಾಗಿ 1,200 ಲಭಿಸುತ್ತಿದೆ. ಉಳಿದಂತೆ ಯಾವುದೇ ರೀತಿಯ ಆರ್ಥಿಕ ನೆರವು ದೊರಕಿಲ್ಲ.

Translate »