ಸರ್ವರನ್ನು ಸಮಾನದಿಂದ ಕಾಣುವ ವಾಟಾಳು ಶ್ರೀಗಳು
ಮೈಸೂರು

ಸರ್ವರನ್ನು ಸಮಾನದಿಂದ ಕಾಣುವ ವಾಟಾಳು ಶ್ರೀಗಳು

December 30, 2019

ತಿ.ನರಸೀಪುರ, ಡಿ.29(ಎಸ್‍ಕೆ)-ಸರ್ವ ಧರ್ಮ ಹಾಗೂ ಸಮುದಾಯವನ್ನು ಸಮಾನ ಭಾವದಿಂದ ಕಾಣುವಂತಹ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಕೋಮು ಸೌಹಾರ್ದತೆಯ ಸಂಕೇತವಾಗಿ ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು.

ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ ಜನ್ಮ ದಿನೋತ್ಸವ ಹಾಗೂ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ದಶಕಗಳಿಂದಲೂ ವಾಟಾಳು ಗ್ರಾಮದಲ್ಲಿರುವ ಸೂರ್ಯ ಸಿಂಹಾಸನ ಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳ ಜಾತ್ಯಾತೀತ ಭಾವನೆ ಎಲ್ಲರಿಗೂ ಆದರ್ಶಪ್ರಾಯ. ರಾಜಕೀಯವಾಗಿಯೂ ಸಲಹೆಗಳನ್ನು ನಿರಂತರವಾಗಿ ನೀಡುತ್ತಿರುವ ಅವರ ಜನ್ಮ ದಿನೋತ್ಸವ ಹಲವು ವರ್ಷಗಳಿಂದ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀಗಳ ಮಾರ್ಗದರ್ಶನ ಜನಸಮುದಾಯಕ್ಕೆ ನಿರಂತರವಾಗಿ ಸಿಗುವಂತಾಗಲಿ ಎಂದು ಆಶಿಸಿದರು.

ತಾಪಂ ಅಧ್ಯಕ್ಷ ಹೆಚ್.ಎನ್.ಉಮೇಶ್ ಮಾತನಾಡಿದರು. ಜನ್ಮದಿನದ ಅಂಗವಾಗಿ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳನ್ನು ಸನ್ಮಾನಿಸಲಾಯಿತು. ನೂರಾರು ಕೆ.ಜಿಯ ಕೇಕನ್ನು ಕತ್ತರಿಸುವ ಮೂಲಕ ವಾಟಾಳು ಶ್ರೀಗಳ ಜನ್ಮ ದಿನೋತ್ಸವ ಆಚರಿಸಲಾಯಿತು. ಖಾಕಿ ಕವಿ ಖ್ಯಾತಿಯ ಅಬ್ದುಲ್ ನಾಸೀರ್ ಕವನ ವಾಚನದ ಮೂಲಕ ಗುರುವಂದನೆ ಸಲ್ಲಿಸಿದರು. ಶ್ರೀ ಶಾರದಾ ನೃತ್ಯ ಶಾಲೆಯ ವಿದ್ಯಾರ್ಥಿಗಳು ವೈದ್ಯ ಡಾ.ಜಿ.ನವೀನ್ ನೇತೃತ್ವದಲ್ಲಿ ನೃತ್ಯ ಪ್ರದರ್ಶಿಸಿದರು.

ತಾಪಂ ಸದಸ್ಯ ಎಂ.ರಮೇಶ್, ಕಾರ್ಯಕ್ರಮದ ಆಯೋಜಕ ಕನ್ನಡ ಪುಟ್ಟಸ್ವಾಮಿ, ಪುರಸಭೆ ಸದಸ್ಯರಾದ ರೂಪಶ್ರೀ ಪರಮೇಶ್, ಎನ್.ಸೋಮು, ಗ್ರಾಪಂ ಅಧ್ಯಕ್ಷರಾದ ಎಸ್.ಬಿ.ಮರಿನಂಜಪ್ಪ, ಬಿ.ಎಂ.ಶಿವಕುಮಾರ್, ಶ್ರೀಕಂಠ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಸಿದ್ಧಪ್ಪ, ಶಂಭುದೇವನಪುರ ಎಂ.ರಮೇಶ್, ಆಹಾರ ಇಲಾಖೆಯ ನಿವೃತ್ತ ಜಂಟಿನಿರ್ದೇಶಕ ಎಸ್.ಇ.ಮಹದೇವಪ್ಪ, ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪನ್ಯಾಸಕ ಕುಮಾರಸ್ವಾಮಿ, ಸಮಾಜ ಸೇವಕ ಎಂ.ಮಾದೇಶ್, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಸಿ.ಲೋಕೇಶ್, ಜಿಲ್ಲಾ ಕಾಂಗ್ರೆಸ್‍ನ ಮಾಧ್ಯಮ ಸಂಚಾಲಕ ಸಂತೃಪ್ತಿ ಕುಮಾರ್, ಕನ್ನಡ ಸೇನೆ ಗೌರವಾಧ್ಯಕ್ಷ ಮಹಮ್ಮದ್ ಹುಸೇನ್ ಹಾಗೂ ಇನ್ನಿತರರಿದ್ದರು.

Translate »