ಬೆಟ್ಟದಪುರದಲ್ಲಿ ಕುವೆಂಪು ಜನ್ಮದಿನಾಚರಣೆ
ಮೈಸೂರು

ಬೆಟ್ಟದಪುರದಲ್ಲಿ ಕುವೆಂಪು ಜನ್ಮದಿನಾಚರಣೆ

December 30, 2019

ಬೆಟ್ಟದಪುರ, ಡಿ.29-ಕುವೆಂಪು 20ನೇ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ ಅವರ ಆದರ್ಶಗಳು ನಮಗೆ ಮುಂದಿನ ಬದುಕಿಗೆ ದಾರಿ ದೀಪವಾಗಲಿ ಎಂದು ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಶುಂಪಾಲ ರೇವಣ್ಣ ತಿಳಿಸಿದರು.

ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಮಗು ಹುಟ್ಟುತ್ತಲೇ ವಿಶ್ವ ಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ. ಅವನನ್ನು ಮತ್ತೆ ವಿಶ್ವಮಾನವನಾಗಿಸುವುದೇ ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶ ಸಾರಿದ ಕುವೆಂಪು ಅವರ ಜನ್ಮದಿನ ಕನ್ನಡಿಗೆರಿಗೆಲ್ಲ ಹೆಮ್ಮೆ ವಿಷಯ ಎಂದು ತಿಳಿಸಿದರು.

ಬೆಟ್ಟದಪುರ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಕೆಂಪರಾಜು ಮಾತನಾಡಿ, ಕನ್ನಡದ ಕಂಪನ್ನು ವಿಶ್ವಮಟ್ಟಕ್ಕೆ ಪಸರಿಸಿದವರು ಕುವೆಂಪು. ಅವರ ಜನ್ಮದಿನವನ್ನು ಇಂದು ನಾವು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.

ಬೆಟ್ಟದಪುರದ ಡಿಟಿಎಂಎನ್ ಶಾಲೆಯಲ್ಲೂ ಕುವೆಂಪುರವರ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಜಗದೀಶ್, ದೈಹಿಕ ಶಿಕ್ಷಕ ನಾರಾಯಣಗೌಡ, ಮುಖ್ಯ ಶಿಕ್ಷಕರಾದ ತಿಮ್ಮಯ್ಯ, ಮುರುಳೀಕೃಷ್ಣ, ಮಹಾದೇವಪ್ಪ, ನಿವೃತ್ತ ಶಿಕ್ಷಕ ಸಣ್ಣಸ್ವಾಮಿಗೌಡ, ಸಮಾಜ ಸೇವಕ ಮಲ್ಲೇಶ್, ಶಿಕ್ಷಕಿಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿದ್ದರು.

Translate »