ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ
ಮೈಸೂರು

ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ

September 1, 2018

ಮೈಸೂರು: ಮತಗಟ್ಟೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನೂರಾರು ಜನರಿದ್ದ ಗುಂಪು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಮೈಸೂ ರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 35ನೇ ವಾರ್ಡ್‍ನಲ್ಲಿ ನಡೆದಿದೆ.

ಬಿಜೆಪಿ ಮುಖಂಡರಾದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡ ಸಂದೇಶ್, ಕಾರ್ಯಕರ್ತರಾದ ಸಮರ್ಥ್, ಚರಣ್, ಗೋವಿಂದ್, ಮಂಜು ಹಾಗೂ ಪ್ರಭು ಅವರ ಮೇಲೆ ಹಲ್ಲೆ ನಡೆದಿದ್ದು, ಇವರಲ್ಲಿ ನಾಲ್ವರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಕಾವೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಚರಣ್ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿ, ಮಾಜಿ ಕಾರ್ಪೊ ರೇಟರ್ ಖಮ್ರುದ್ದಿನ್ ಹಾಗೂ ಸಹ ಚರರು ನಕಲಿ ಮತದಾನ ಮಾಡಿಸು ತ್ತಿದ್ದರು. ಅಲ್ಲದೆ ಶೇ.33ಕ್ಕಿಂತ ಹೆಚ್ಚು ಮತದಾನವಾದರೆ ಬಿಜೆಪಿ ಅಭ್ಯರ್ಥಿ ಗೆಲ್ಲಬಹುದೆಂಬ ಕಾರಣಕ್ಕೆ ಬಿಜೆಪಿ ಮತ ದಾರರು ಮತಗಟ್ಟೆ ಬಳಿ ಬರದಂತೆ ಗದ್ದಲ ಸೃಷ್ಟಿಸುತ್ತಿದ್ದರು.

ಇನ್ನು ಅರ್ಧಗಂಟೆ ಯಲ್ಲಿ ಮತದಾನ ಮುಗಿಯಬೇಕಿತ್ತು. ಅಷ್ಟರಲ್ಲಿ ಸುಮಾರು 250ಕ್ಕೂ ಹೆಚ್ಚು ಜನರ ಗುಂಪು, ಬಿಜೆಪಿಯವರ ಮೇಲೆ ಏಕಾಏಕಿ ಹಲ್ಲೆ ನಡೆಸಿತು. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಅಟ್ಟಾಡಿಸಿಕೊಂಡು ಹೊಡೆದರು: ಬಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು, ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆಸಿದರೆಂದು ಮಾಜಿ ಮೇಯರ್ ಸಂದೇಶ್‍ಸ್ವಾಮಿ ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. ಕಳೆದ ಐದಾರು ದಿನಗಳಿಂದಲೂ ಬಿಜೆಪಿ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಧಮ್ಕಿ ಹಾಕಲಾಗುತ್ತಿತ್ತು. ಕೇವಲ 10 ಅಡಿ ಅಳತೆಯ ಕಿಷ್ಕಿಂಧೆ ರಸ್ತೆಯಲ್ಲಿರುವ ಉರ್ದು ಶಾಲೆಯಲ್ಲಿ 5 ಬೂತ್‍ಗಳನ್ನು ಸ್ಥಾಪಿಸಲಾಗಿತ್ತು. ಈ ಮತಗಟ್ಟೆ ಕೇಂದ್ರದ ಸುತ್ತಮುತ್ತ ಕಾಂಗ್ರೆಸ್, ಎಸ್‍ಡಿಪಿಐನ ಸಾವಿರಾರು ಕಾರ್ಯಕರ್ತರು ಜಮಾಯಿಸಿ, ಮಹಿಳೆಯರು ಮತಗಟ್ಟೆ ಬಳಿ ಬಾರದಂತೆ ಅಡ್ಡಿಪಡಿಸಿದ್ದರು. ಮತದಾನದ ಕಡೇ ಅರ್ಧ ಗಂಟೆಯಲ್ಲಿ ನಕಲಿ ಮತದಾನ ಮಾಡಿಸುವ ಹುನ್ನಾರ ನಡೆದಿತ್ತು. ಇದನ್ನರಿತ ಸಂದೇಶ್, ಓರ್ವ ಯುವಕನನ್ನು ಪ್ರಶ್ನಿಸಿದ್ದು, ಆತ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲಿಯೇ ಇದ್ದ ನಮ್ಮ ಕಾರ್ಯಕರ್ತರು ಅಲ್ಲಿಗೆ ದೌಡಾಯಿಸಿ, ಏಕೆ ಹೊಡೆದೆ ಎಂದು ಕೇಳಿದ್ದಾರೆ. ವಿಷಯ ತಿಳಿದು ನಾನೂ ಅಲ್ಲಿಗೆ ತೆರಳಿದೆ. ಕೆಲಹೊತ್ತಿನಲ್ಲೇ ಸುಮಾರು 250ಕ್ಕೂ ಹೆಚ್ಚು ಮಂದಿ, ಕಲ್ಲು, ದೊಣ್ಣೆ, ಮಾರಕಾಸ್ತ್ರಗಳನ್ನು ಹಿಡಿದು ನಮ್ಮ ಮೇಲೆ ದಾಳಿ ನಡೆಸಿದರು. ಮತಗಟ್ಟೆ ಕೇಂದ್ರದ ಬಳಿಯಿಂದ ತ್ರಿವೇಣಿ ವೃತ್ತದವರೆಗೂ ಸಿನಿಮೀಯ ರೀತಿಯಲ್ಲಿ ನಮ್ಮ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆ ನಡೆಸಿದರು. ಅವರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನೂ ಕಿತ್ತುಕೊಂಡರು. ಸಾರ್ವಜನಿಕರು, ಗಾಯಗೊಂಡವರನ್ನು ಆಟೋ, ಬೈಕ್‍ಗಳಲ್ಲಿ ಕೂರಿಸಿಕೊಂಡು ಪಾರು ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದರು. ಘಟನೆಯಲ್ಲಿ ನನಗೂ ಒಂದು ಕಲ್ಲು ಬಿದ್ದು, ಪೆಟ್ಟಾಯಿತು ಎಂದು ತಿಳಿಸಿದರು.

ಕಳೆದ ನಾಲ್ಕು ದಶಕಗಳಿಂದ ನರಸಿಂಹರಾಜ ಕ್ಷೇತ್ರದಲ್ಲಿ ಗೂಂಡಾಗಿರಿಗೆ ಉತ್ತೇಜನ ನೀಡಿರುವ ಪರಿಣಾಮ ಈ ಘಟನೆ ನಡೆದಿದೆ. ಶಾಸಕ ತನ್ವೀರ್‍ಸೇಠ್ ಅವರ ಆಪ್ತ ಮಂಜುನಾಥ್ ಅವರು 2 ಬಾರಿ ಬೇರೆ ವಾರ್ಡ್‍ನಲ್ಲಿ ಸ್ಫರ್ಧಿಸಿ ಸೋತಿದ್ದಾರೆ. ಈ ಬಾರಿ ಹೇಗಾದರೂ ಗೆಲ್ಲಿಸಬೇಕೆಂಬ ಕಾರಣಕ್ಕೆ ಹೀಗೆ ಭಯಭೀತ ವಾತಾವರಣ ಸೃಷ್ಟಿ ಮಾಡಿದ್ದಾರೆ. ಈ ಬಾಗದಲ್ಲಿ ಬಿಜೆಪಿ ಗೆಲ್ಲಲೇಬಾರದೆಂದು ದೌರ್ಜನ್ಯ ನಡೆಸಿದ್ದಾರೆ. ಇಡೀ ಕ್ಷೇತ್ರದಲ್ಲಿ ಕ್ರೌರ್ಯ ನೆಲೆಸುವಂತೆ ಮಾಡಿದ್ದಾರೆ. ಇಂದಿನ ಘಟನೆಗೆ ಮಾಜಿ ಕಾರ್ಪೊರೇಟರ್ ಖಮ್ರುದ್ದೀನ್ ಮುಖ್ಯಸ್ಥನಾಗಿದ್ದ. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅಲ್ಲಿಯೇ ನಿಂತು ಹಲ್ಲೆ ನಡೆಸುವುದನ್ನು ಗಮನಿಸುತ್ತಿದ್ದರು. ಪೊಲೀಸ್ ಬಂದೋಬಸ್ತ್ ಇದ್ದರೂ ಈ ರೀತಿ ಘಟನೆ ನಡೆದರೆ ಸಾಮಾನ್ಯರು ನೆಮ್ಮದಿಯಿಂದ ಬದುಕುವುದು ಸಾಧ್ಯವೇ?. ಪೊಲೀಸರಿಗೆ ತಿಳಿಸಿದರೆ ಆ ಭಾಗಕ್ಕೆ ಅವರೇ ಹೋಗುವುದಿಲ್ಲ. ನಿಜಕ್ಕೂ ನರಸಿಂಹರಾಜ ಕ್ಷೇತ್ರ ಯಾವ ರಾಜ್ಯದಲ್ಲಿದೆ ಎಂದು ಆತಂಕವಾಗುತ್ತದೆ. ನನ್ನ ಜೀವನದಲ್ಲೇ ಇಂತಹ ಘಟನೆಯನ್ನು ನೋಡಿರಲಿಲ್ಲ. ಇಡೀ ಮೈಸೂರು ತಲೆ ತಗ್ಗಿಸುವ ಕೃತ್ಯ ನಡೆದಿದೆ ಎಂದು ಸಂದೇಶ್‍ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತನ್ವೀರ್ ವಿರುದ್ಧ ಸಂಸದ ಪ್ರತಾಪಸಿಂಹ ಗಂಭೀರ ಆರೋಪ: ಕಲ್ಯಾಣಗಿರಿಯಲ್ಲಿ ಇಂದು ನಡೆದ ಗಲಾಟೆ ಹಿಂದೆ ಶಾಸಕ ತನ್ವೀರ್ ಸೇಠ್ ಅವರ ಕೈವಾಡವಿದೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

ಇಂತಹ ಘಟನೆಗಳು ಇದೇ ಮೊದಲೇನಲ್ಲ. ಹಿಂದಿನ ವಿಧಾನಸಭಾ ಚುನಾವಣೆ ಮತದಾನದ ದಿನದಂದು ನನಗೆ ಎಸ್‍ಡಿಪಿಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ್ದರು. ಇಂದೂ ಸಹ ಶ್ರೀಕಂಠೇಶ್ವರ ಶಾಲೆ ಮತಗಟ್ಟೆಗೆ ಹೋದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬೆಳಿಗ್ಗೆಯಿಂದಲೇ ಅನೇಕ ಮತಗಟ್ಟೆ ಬಳಿ ಉದ್ವಿಗ್ನ ಪರಿಸ್ಥಿತಿ ಇತ್ತು.

ಹಾಗೆಯೇ ಸಂಜೆ ಸುಮಾರು 4.30ರ ವೇಳೆಯಲ್ಲಿ ಉರ್ದು ಶಾಲೆ ಮತಗಟ್ಟೆ ಬಳಿ ಸಂದೇಶ್‍ಸ್ವಾಮಿ, ಸಂದೇಶ್, ಶರತ್ ಸೇರಿದಂತೆ ಐದಾರು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಕಡೇ ಗಳಿಗೆಯಲ್ಲಿ ನಕಲಿ ಮತದಾನ ಮಾಡಿಸಿದ್ದಲ್ಲದೆ, ಬಿಜೆಪಿ ಮತದಾರರನ್ನು ವಾಪಸ್ಸು ಕಳುಹಿಸಿದ್ದಾರೆ ಎಂದು ದೂರಿದರು.

ತನ್ವೀರ್‍ಸೇಠ್ ಅವರು ತಮ್ಮ ಬಲಗೈ ಭಂಟ ಮಂಜುನಾಥ್ ಅವರನ್ನು ಗೆಲ್ಲಿಸಲು ಹೀಗೆಲ್ಲಾ ಮಾಡಿಸಿದ್ದಾರೆ. ಅವರು ಸಹ ಗೆದ್ದಿದ್ದೂ ಇದೇ ನಕಲಿ ಮತದಾನದಿಂದ. ಈ ಹಿಂದೆ 37 ಸಾವಿರ ಮತ ಪಡೆದಿದ್ದ ತನ್ವೀರ್ ಸೇಠ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ 67 ಸಾವಿರ ಮತ ಪಡೆದಿದ್ದಾರೆ. ಇದು ಯಾವ ಮ್ಯಾಜಿಕ್‍ನಿಂದ ಆದದ್ದಲ್ಲ. ಇದೇ ರೀತಿ ನಕಲಿ ಮತದಾನದಿಂದ ಅವರು ಗೆದ್ದಿದ್ದು. ಆ ಬಗ್ಗೆ ಹೈಕೋರ್ಟ್‍ನಲ್ಲಿ ಪ್ರಕರಣವೂ ನಡೆಯುತ್ತಿದೆ. ಪೊಲೀಸರು, ಇಂದಿನ ಘಟನೆಯ ಮುಂದಾಳತ್ವ ವಹಿಸಿದ್ದ ಖಮ್ರುದ್ದೀನ್ ಹಾಗೂ ಮಂಜುನಾಥ್ ಅವರನ್ನು ವಿಚಾರಣೆ ನಡೆಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕ್ಷೇತ್ರದಲ್ಲಿ ಪದೇ ಪದೆ ಈ ರೀತಿಯ ಘಟನೆ ನಡೆಯುತ್ತಿರುವುದರಿಂದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಲ್ಲೆ ಖಂಡಿಸಿ ಪ್ರತಿಭಟನೆಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಕಲ್ಯಾಣಗಿರಿಯ ತ್ರಿವೇಣಿ ವೃತ್ತದ ಬಳಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಂಸದ ಪ್ರತಾಪ್‍ಸಿಂಹ, ಶಾಸಕ ಎಲ್.ನಾಗೇಂದ್ರ, ಸಂದೇಶ್‍ಸ್ವಾಮಿ, ಸಂದೇಶ್, ಬಿಜೆಪಿ ನಗರಾಧ್ಯಕ್ಷ ಡಾ. ಬಿ.ಹೆಚ್. ಮಂಜುನಾಥ್, 35ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಸಾತ್ವಿಕ್, ಗಿರಿಧರ್ ಸೇರಿದಂತೆ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಘಟನೆಯನ್ನು ಖಂಡಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಪಿ ವಿಷ್ಣುವರ್ಧನ್ ಅವರು, ನಿಮ್ಮ ದೂರಿನನ್ವಯ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಂದೇಶ್‍ಸ್ವಾಮಿ ಅವರ ಮನವೊಲಿಸಿದರು. ಡಿಸಿಪಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು.

ಮರು ಮತದಾನಕ್ಕೆ ಆಗ್ರಹ: 35ನೇ ವಾರ್ಡ್‍ನ 366, 367, 364, 365 ಹಾಗೂ 362 ಮತಗಟ್ಟೆಯಲ್ಲಿ ನಕಲಿ ಮತದಾನ ನಡೆಸಲಾಗಿದ್ದು, ಮರು ಮತದಾನಕ್ಕೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಸಂಸದ ಪ್ರತಾಪ್‍ಸಿಂಹ ಹಾಗೂ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಪ್ರತಿಭಟನೆ ಸಂದರ್ಭದಲ್ಲಿ ಆಗ್ರಹಿಸಿದರು.

Translate »