ಶಾಂತಿಯುತ ಶೇ.50.01ರಷ್ಟು ಮತದಾನ
ಮೈಸೂರು

ಶಾಂತಿಯುತ ಶೇ.50.01ರಷ್ಟು ಮತದಾನ

September 1, 2018

ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲದೆ ಇನ್ನಿತರೆ ಸಣ್ಣಪುಟ್ಟ ಪಕ್ಷಗಳಲ್ಲದೆ ಪಕ್ಷೇತರರು ಸ್ಪರ್ಧಿಸಿರುವುದರಿಂದ ಸಹಜವಾಗಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಮತದಾನದ ವೇಳೆ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತಗಟ್ಟೆ ಬಳಿ ಮತದಾರನ ಓಲೈಕೆಗೆ ಯತ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಗೆ ಪ್ರಾರಂಭದ ಒಂದು ಗಂಟೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅರ್ಧ ತಾಸು ಕೆಲ ಬೂತ್‍ಗಳಲ್ಲಿ ಒಂದೇ ಒಂದು ಮತವೂ ಚಲಾವಣೆಯಾಗಿರಲಿಲ್ಲವಾದ್ದರಿಂದ ಬೆಳಿಗ್ಗೆ 9 ಗಂಟೆವರೆಗೆ ಎಲ್ಲಾ 65 ವಾರ್ಡುಗಳಿಂದ ಕೇವಲ ಶೇ. 6.04ರಷ್ಟು ಮತದಾನ ದಾಖಲಾಯಿತು. ಬೆಳಿಗ್ಗೆ 11 ಗಂಟೆ ವೇಳೆಗೆ ಶೇ.14.49, ಮಧ್ಯಾಹ್ನ 1 ಗಂಟೆಗೆ ಶೇ.25.62, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.35.28 ರಷ್ಟು ಮತದಾನವಾದ ಬಗ್ಗೆ ವರದಿಯಾಗಿತ್ತು. ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಬೆಳಿಗ್ಗೆ 10 ಗಂಟೆ ನಂತರ ಚುರುಕುಗೊಂಡಿತು. ಯುವಕರು, ವಯಸ್ಕರು, ವೃದ್ಧರು, ಅಂಗವಿಕಲರೆನ್ನದೇ ಮತದಾರರು ಬೆಳಿಗ್ಗೆ 11 ರಿಂದ 1.30 ಹಾಗೂ ಸಂಜೆ 4ರಿಂದ 5 ಗಂಟೆವರೆಗೆ ಮತಗಟ್ಟೆಗಳಿಗೆ ಬಂದು ಸಾಲುಗಟ್ಟಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.

ಸಂಜೆ 5 ಗಂಟೆಯೊಳಗೆ ಮತಗಟ್ಟೆ ಆವರಣಕ್ಕೆ ಪ್ರವೇಶಿಸಿದ ಪ್ರತಿಯೊಬ್ಬರಿಗೂ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಸಂಜೆ ಸರಿಯಾಗಿ 5 ಗಂಟೆಗೆ ಮತಗಟ್ಟೆ ಕಾಂಪೌಂಡ್ ಗೇಟ್ ಬಂದ್ ಮಾಡಲಾಯಿತು. ಒಟ್ಟಾರೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 65 ವಾರ್ಡುಗಳಲ್ಲಿ ಇಂದು ಶೇ.50.01 ರಷ್ಟು ಮತದಾನವಾಗಿದೆ. ಮತಗಟ್ಟೆ ಬಳಿ ಮತಗಟ್ಟೆ ಸಂಖ್ಯೆ, ವಾರ್ಡಿನ ಸಂಖ್ಯೆ ಇತ್ಯಾದಿ ಮಾಹಿತಿಗಳು ಹಾಗೂ ಮತದಾರರ ಅನುಕೂಲಕ್ಕಾಗಿ ಮಾರ್ಗದರ್ಶಿ ಬೋರ್ಡುಗಳನ್ನು ಹಾಕಲಾಗಿತ್ತು. ಮತ ಕೇಂದ್ರದಿಂದ 200 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಟೇಬಲ್‍ಗಳನ್ನು ಹಾಕಿಕೊಂಡು ಮತದಾರರ ಪಟ್ಟಿ ಯಲ್ಲಿರುವಂತೆ ಕ್ರಮ ಸಂಖ್ಯೆ, ಭಾಗದ ಸಂಖ್ಯೆ ವಿವರಗಳಿರುವ ಚೀಟಿಗಳನ್ನು ಕೊಟ್ಟು ಮತದಾರರಿಗೆ ಸಹಾಯ ಮಾಡುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಕೋರಿಕೊಳ್ಳುತ್ತಿದ್ದುದೂ ಕಂಡುಬಂದಿತು.

ಅಲ್ಲದೇ ಮತಗಟ್ಟೆ ಆವರಣದಲ್ಲಿ ಮೈಸೂರು ನಗರ ಪಾಲಿಕೆ ಸಿಬ್ಬಂದಿಗಳಿಬ್ಬರು ಕುಳಿತು ಮತದಾರರ ಪಟ್ಟಿಯಲ್ಲಿರುವಂತೆ ಭಾವಚಿತ್ರವಿರುವ ಮುದ್ರಿತ ಚೀಟಿಯನ್ನು ಕೊಟ್ಟು ಆಯಾ ಮತಗಟ್ಟೆಗಳಿಗೆ ಕಳುಹಿಸುತ್ತಿದ್ದರು. ಆ ಚೀಟಿ ತಂದ ಪ್ರತಿಯೊಬ್ಬರಿಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಮತದಾರರ ಗುರುತಿನ ಚೀಟಿ ಇಲ್ಲದವರಿಗೆ ಭಾವಚಿತ್ರವಿರುವ ಇನ್ನಿತರ 22 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ತಂದವರೂ ತಮ್ಮ ಹಕ್ಕು ಚಲಾಯಿಸಿದರು. ಅಂಗವಿಕಲರು, ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರನ್ನು ಅವರ ಸಂಬಂಧಿಗಳು ಕರೆತಂದು, ಮತ ಚಲಾಯಿಸಿದ ನಂತರ ಮತದಾನ ಮಾಡಿಸುತ್ತಿದ್ದುದು ಸಾಮಾನ್ಯವಾಗಿತ್ತು. ಅಂತಿಮ ಘಳಿಗೆಯಲ್ಲಿ ಅಭ್ಯರ್ಥಿಗಳ ಬೆಂಬಲಿಗರೇ ತಮಗೆ ಗೊತ್ತಿರುವ ಮತದಾರರನ್ನು ತಮ್ಮ ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ವಾಪಸ್ ಬಿಡುತ್ತಿದ್ದುದೂ ಹಲವೆಡೆ ಕಂಡುಬಂದಿತು.
ಚುನಾವಣಾ ವೀಕ್ಷಕರು ಆಯಾ ವಾರ್ಡು ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಮತ ಕೇಂದ್ರದ 200 ಮೀಟರ್ ಸರಹದ್ದಿನಲ್ಲಿ ಚುನಾವಣಾ ಪ್ರಚಾರ ನಡೆಸದಂತೆ ಎಚ್ಚರ ವಹಿಸುತ್ತಿದ್ದರು.

ಎಲ್ಲಾ 815 ಮತಗಟ್ಟೆಗಳಲ್ಲೂ ಅಧ್ಯಕ್ಷೀಯ ಅಧಿಕಾರಿ ಸೇರಿದಂತೆ ಐವರು ಸಿಬ್ಬಂದಿ ಹಾಜರಿದ್ದು, ಮತದಾನ ಆರಂಭವಾಗುವ ಮುಂಚೆ ಬೆಳಿಗ್ಗೆ 6ರಿಂದ 7 ಗಂಟೆಯೊಳಗೆ ಅಣಕು ಮತದಾನ ಮಾಡಿ ವಿದ್ಯುನ್ಮಾನ ಮತಯಂತ್ರ, ಕಂಟ್ರೋಲ್ ಅಂಡ್ ಬ್ಯಾಲೆಟ್ ಯೂನಿಟ್) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಾತರಿ ಪಡಿಸಿಕೊಂಡರಾದರೂ, 64, 16ನೇ ವಾರ್ಡಿನ ಎರಡು ಮತಗಟ್ಟೆಗಳ ಇವಿಎಂಗಳು ಕೈಕೊಟ್ಟ ಕಾರಣ ಬದಲಿ ಇವಿಎಂಗಳನ್ನು ಅಳವಡಿಸಬೇಕಾಯಿತು.

ಇದೀಗ ಮತದಾನ ಮುಕ್ತಾಯಗೊಂಡಿದ್ದು, ಸೀಲ್ ಮಾಡಿದ ಇವಿಎಂಗಳನ್ನು ಪಾಲಿಕೆಯ 4 ಮಸ್ಟರಿಂಗ್ ಕೇಂದ್ರಗಳಾದ ಮಹಾರಾಣಿ ಕಲಾ ಕಾಲೇಜು, ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮಹಾರಾಜ ಕಾಲೇಜು ಶತಮಾನೋತ್ಸವ ಭವನ ಹಾಗೂ ಟೆರೇಷಿಯನ್ ಕಾಲೇಜುಗಳಿಗೆ ಆಯಾ ಚುನಾವಣಾಧಿಕಾರಿಗಳು ತಂದು ದಾಖಲಿಸಿದರು. ಸಂಪೂರ್ಣ ವೀಡಿಯೊ ರೆಕಾರ್ಡಿಂಗ್ ಮಾಡಿದ ನಂತರ ಇವಿಎಂಗಳನ್ನು ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹೊಸ ಕಟ್ಟಡದ ಸ್ಟ್ರಾಂಗ್ ರೂಂಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ತಂದು ಇರಿಸಿ, ಸೀಲ್ ಮಾಡಲಾಗಿದೆ.

ಪ್ರತೀ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆಯನ್ನು ವೀಡಿಯೋ ರೆಕಾರ್ಡಿಂಗ್ ಮಾಡಲಾಗಿದ್ದು, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

Translate »