ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ

September 1, 2018

ಮೈಸೂರು:  ಪಾಲಿಕೆ ಮಿನಿ ಸಮರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿ ಗಳ ಭವಿಷ್ಯವೀಗ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳಲ್ಲಿ ಭದ್ರವಾಗಿದೆ.

ಇಂದು ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಮತದಾರ ತನ್ನ ತೀರ್ಪನ್ನು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ದಾಖಲಿಸಿದ್ದಾನೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 393 ಅಭ್ಯರ್ಥಿಗಳ ಅದೃಷ್ಟ ಸೆಪ್ಟೆಂಬರ್ 3ರಂದು ಬಹಿರಂಗಗೊಳ್ಳಲಿದೆ.

ಮೈಸೂರು ಮಹಾನಗರಪಾಲಿಕೆಯ ಒಟ್ಟು 815 ಮತಗಟ್ಟೆಗಳಲ್ಲಿ ದಾಖಲಾದ ಮತಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ತಮ್ಮ ದೃಢೀಕರಣದೊಂದಿಗೆ ಆಯಾ ಚುನಾವಣಾಧಿಕಾರಿಗಳು ಸೀಲ್ ಮಾಡಿದ ಇವಿಎಂಗಳನ್ನು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಸಾರಿಗೆ ಬಸ್ಸಿನಲ್ಲಿ ಕೊಂಡೊಯ್ದು ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ದಾಖಲಿಸಿದರು.

ನಂತರ ತಡರಾತ್ರಿ ಪೊಲೀಸ್ ಬೆಂಗಾವಲಿನಲ್ಲಿ ಇವಿಎಂಗಳನ್ನು ತಂದು ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ನೂತನ ಕಟ್ಟಡದ ಸ್ಟ್ರಾಂಗ್ ರೂಂನಲ್ಲಿರಿಸಲಾಗಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಮತಗಟ್ಟೆಗಳ ಇವಿಎಂಗಳನ್ನು ಸ್ಟ್ರಾಂಗ್ ರೂಂನಲ್ಲಿಟ್ಟು ಬಾಗಿಲು, ಕಿಟಕಿಗಳನ್ನು ಬಂದ್ ಮಾಡಿ ನಂತರ ಅದರ ಮೇಲೆ ಫ್ಲೈವುಡ್‍ನಿಂದ ಭದ್ರ ಮಾಡಿ ಸೀಲ್ ಮಾಡಲಾಗಿದೆ.

ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಇದೀಗ ಸ್ಟ್ರಾಂಗ್ ರೂಂಗಳಿಗೆ ದಿನದ 24 ಗಂಟೆ ಮೂರು ಪಾಳಿಗಳಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

Translate »