ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಬಿಜೆಪಿ ಶಾಸಕ ವಿಶ್ವನಾಥ್ ಭೇಟಿ
ಮೈಸೂರು

ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಬಿಜೆಪಿ ಶಾಸಕ ವಿಶ್ವನಾಥ್ ಭೇಟಿ

July 14, 2019

ಬೆಂಗಳೂರು, ಜು.13-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರನ್ನು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಕೆಲವು ಬಿಜೆಪಿ ಕಾರ್ಯಕರ್ತರು ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇಂದು ಬೆಳಿಗ್ಗೆ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತಿತರರು ಬೆಂಗಳೂರಿನ ಲಕ್ಕಸಂದ್ರದಲ್ಲಿರುವ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಸುಮಾರು 1 ಗಂಟೆ ಕಾಲ ಮಹತ್ವದ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಿಶ್ವನಾಥ್, ನಾವು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ರೈತ ಸಂಘದ ಚುನಾವಣೆ ಬಗ್ಗೆ ಮಾತನಾಡಿದ್ದೇವೆ ಎಂದರೆ, ರಾಮಲಿಂಗಾ ರೆಡ್ಡಿಯವರು, ನನ್ನ ಮನೆಗೆ ಎಲ್ಲಾ ಪಕ್ಷದ ಮುಖಂಡರು ಬರುವುದು ಸರ್ವೇ ಸಾಮಾನ್ಯ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು. ರಾಜೀನಾಮೆ ಹಿಂಪಡೆಯುವಿರಾ? ಇಲ್ಲವಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಅವರು, ಜು.15ರವರೆಗೆ ನಾನು ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನಾನು ಯಾವುದೇ ಶಾಸಕರನ್ನು ರಾಜೀನಾಮೆ ನೀಡುವಂತೆ ಹೇಳಿಲ್ಲ. ರಾಜಕೀಯದ ಬಗ್ಗೆ ಹೆಚ್ಚು ಮಾತನಾಡುವುದೂ ಇಲ್ಲ ಎಂದರಲ್ಲದೇ, ಸೋಮವಾರ ಅಧಿವೇಶನದಲ್ಲಿ ತಾವು ಭಾಗವಹಿಸಲಿರುವುದಾಗಿ ಹೇಳಿದರು.