ಮಾತೃಭಾಷೆ, ಜನ್ಮಭೂಮಿ ಎಂದೂ ಮರೆಯಬೇಡಿ
ಮೈಸೂರು

ಮಾತೃಭಾಷೆ, ಜನ್ಮಭೂಮಿ ಎಂದೂ ಮರೆಯಬೇಡಿ

July 14, 2019

ಮೈಸೂರು,ಜು.13(ಆರ್‍ಕೆ)- ಮಾತೃ ಭಾಷೆ ಮತ್ತು ಜನ್ಮಭೂಮಿಯನ್ನು ಪ್ರತಿಯೊಬ್ಬರೂ ಮರೆಯ ಬಾರದು ಎಂದು ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಇಂದಿಲ್ಲಿ ಸಲಹೆ ನೀಡಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನ(ಅIIಐ)ದ ಆವ ರಣದಲ್ಲಿ ಇಂದಿನಿಂದ ಆರಂಭವಾದ 5 ದಿನಗಳ ಸಂಸ್ಥೆಯ ಸ್ವರ್ಣ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಯಾವಾ ಗಲೂ ನಮ್ಮ ಮಾತೃಭಾಷೆ, ಜನ್ಮಭೂಮಿ, ವಿದ್ಯೆ ಕಲಿಸಿದ ಗುರು ಜನ್ಮ ನೀಡಿದ ತಾಯಿಯನ್ನು ಮರೆಯಬಾರದೆಂದು ಕಿವಿಮಾತು ಹೇಳಿದರು.

`ಮಮ್ಮಿ- ಡ್ಯಾಡಿ’ ಪದಗಳು ತುಟಿಯಿಂದ ಬರುತ್ತವೆ. ಆದರೆ `ಅಮ್ಮಾ’ ಎಂಬುದು ಅಂತರಾಳ ದಿಂದ ಬರುವಂತಹದು. ಆದ್ದರಿಂದ ತಾಯಿಯ ಕರುಳಿನಿಂದಲೇ ಬರುವ ಭಾಷೆಯನ್ನು ಮರೆಯ ಬಾರದು. ಅದರಲ್ಲಿ ಭಾವನೆಗಳು ಅಡಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಆಂಗ್ಲ ಭಾಷೆ ವಿದೇಶಿಯರೊಂದಿಗೆ ಮಾತ ನಾಡಲಷ್ಟೇ ಚೆನ್ನ. ಪ್ರತಿಯೊಬ್ಬರೂ ತಾಯಿ, ತಾಯಿನಾಡು, ಜನ್ಮಭೂಮಿ ಮತ್ತು ಮಾತೃಭಾಷೆ ಯನ್ನು ಮರೆಯಬಾರದು. ಒಂದು ವೇಳೆ ನಿರ್ಲ ಕ್ಷಿಸಿದರೆ ಅಂತಹವರನ್ನು ಮಾನವೀಯ ಗುಣವುಳ್ಳವರೆಂದು ಕರೆಯಲಾಗದು ಎಂದ ಅವರು, ಯಾವಾಗಲೂ ನೀವು ನಿಮ್ಮ ಮಾತೃ ಭಾಷೆಯಲ್ಲೇ ಮಾತನಾಡಿ, ತಾಯಿಯ ಅಂತರಾಳ ದಿಂದ ಬಂದ ಭಾಷೆಯನ್ನು ಗೌರವಿಸಿ ಎಂದರು.

ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಒಂದು ಸಲಕರಣೆ. ನಮಗೆ ಸರಳವೆನ್ನುವ ಹಾಗೂ ಸುಲಭ ಭಾಷೆಯನ್ನೇ ಬಳಸಬೇಕು. ಹೃದಯದಿಂದ ಬರುವ `ಅಮ್ಮಾ’ ಎಂಬುದು ಅದೆಷ್ಟು ಸುಂದರ ಭಾಷೆ. ಅದರಲ್ಲಿ ಸಿಗುವ ಆನಂದವೇ ಬೇರೆ. ಅದು ಸಂಸ್ಕøತ, ಹಿಂದಿ, ಉರ್ದು, ತೆಲುಗು ಯಾವುದೇ ಆಗಿರಲಿ, ನಿಮ್ಮ ಮಾತೃಭಾಷೆಯಲ್ಲೇ ಮಾತನಾಡ ಬೇಕು ಎಂದು ವೆಂಕಯ್ಯನಾಯ್ಡು ಪುನರುಚ್ಛರಿಸಿದರು.

ನಾನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿ ಷರು, ಆರ್ಥಿಕ ಸಂಪತ್ತನ್ನು ಲೂಟಿ ಮಾಡಿದರು. ಜತೆಗೆ ನಮ್ಮ ಭಾವನೆಗಳಿಗೆ ಧಕ್ಕೆ ತಂದರು. ಅವರೇ ಬಿಟ್ಟು ಹೋದ ಇಂಗ್ಲಿಷ್ ಅನ್ನು ಆರಾಧಿಸಿದರು. ಇದು ಸರಿನಾ ಎಂದು ಪ್ರಶ್ನಿಸಿದ ಅವರು, ಇಂಗ್ಲಿಷ್‍ನಲ್ಲಿ ಮಾತನಾಡಿ ದರೆ ಮಾತ್ರ ಮನುಷ್ಯ ದೊಡ್ಡವನಾಗುವುದಿಲ್ಲ ಎಂದರು.

ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಯಾವ ಇಂಗ್ಲಿಷ್ ಕಾನ್ವೆಂಟಿನಲ್ಲಿ ಓದಿದರು? ಅವರು ಮುಖ್ಯಮಂತ್ರಿ ಆಗಿಲ್ಲವೆ? ಪಕ್ಕದ ಚಂದ್ರಬಾಬು ನಾಯ್ಡು, ಪಳನಿ ಸ್ವಾಮಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಾನು (ವೆಂಕಯ್ಯ ನಾಯ್ಡು)ಯಾವ ಇಂಗ್ಲಿಷ್ ಕಾನ್ವೆಂಟಿನಲ್ಲಿ ಓದಿದ್ದೆವು. ಅವರೆಲ್ಲಾ ಉನ್ನತ ಸ್ನಾನಕ್ಕೇರಿಲ್ಲವೆ ಎಂದೂ ಉಪ ರಾಷ್ಟ್ರಪತಿಗಳು ಉದಾಹರಣೆ ನೀಡಿದರು.

ಒಬ್ಬ ವ್ಯಕ್ತಿ ಉತ್ತುಂಗ ಸ್ಥಾನಕ್ಕೇರುವುದು ಪರಿ ಶ್ರಮ, ಶಿಸ್ತು, ದುಡಿಮೆ ಹಾಗೂ ಮೌಲ್ಯ ಗಳಿಂದಲೇ ಹೊರತು,. ಇಂಗ್ಲಿಷ್ ಭಾಷೆಯಿಂದಲ್ಲ ಎಂದ ಅವರು, ಹಳ್ಳಿಯವರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡಿದರೆ, ಪಿರಿಯಾಪಟ್ಟಣದಲ್ಲಿ ತಂಬಾಕು ರೈತರೊಂದಿಗೆ ಇಂಗ್ಲಿಷ್‍ನಲ್ಲಿ ಹೇಳಿದರೆ ಅವರಿಗೆ ಅರ್ಥವಾಗುತ್ತದೆಯೆ, ಅವರ ಮಾತೃ ಭಾಷೆಯಲ್ಲೇ ವ್ಯವಹರಿಸಿದರೆ ಮಾತ್ರ ಅವರಿಗೂ ಅರ್ಥವಾಗುತ್ತದೆ ಎಂದು ನುಡಿದರು.

ನ್ಯಾಯಾಲಯಗಳಲ್ಲೂ ಪ್ರಕರಣಗಳ ವಿಚಾರಣೆ ಗಳು, ಕಲಾಪಗಳು, ತೀರ್ಪುಗಳೂ ಆಯಾ ಸ್ಥಳೀಯ ಭಾಷೆಗಳಲ್ಲೇ ಆದರೆ, ಕಕ್ಷಿದಾರನಿಗೆ ತಮ್ಮ ವಕೀಲ ಏನೇನು ಮಾತನಾಡುತ್ತಾನೆ ಎಂಬುದು ಅರ್ಥ ವಾಗುತ್ತದೆ ಎಂದ ಅವರು, ಸುಪ್ರೀಂಕೋರ್ಟ್ ಆದೇಶ ದಂತೆ ನ್ಯಾಯಾಲಯಗಳಲ್ಲಿ ಮಾತೃ ಭಾಷೆಯಲ್ಲೇ ವ್ಯವಹರಿಸುವಂತಾಗಬೇಕು. ಅಧಿಕಾರಿಗಳೂ ಆ ಭಾಷೆಯನ್ನು ಕಲಿತು ವ್ಯವಹರಿಸಬೇಕು ಎಂದು ವೆಂಕಯ್ಯನಾಯ್ಡು ಅಭಿಪ್ರಾಯಪಟ್ಟರು.

ಯಾವುದೇ ಭಾಷೆಯನ್ನು ನಾನು ವಿರೋಧಿ ಸುವುದಿಲ್ಲ, ಆದರೆ ಮಾತೃ ಭಾಷೆಯನ್ನು ತಿರಸ್ಕರಿಸ ಬಾರದು. ಅದರಲ್ಲಿ ನಮ್ಮ ಸಂಸ್ಕøತಿ, ಸಂಸ್ಕಾರ, ಭಾವನೆ ಅಡಗಿರುತ್ತದೆ. ಭಾರತೀಯ ಭಾಷೆಗಳನ್ನು ಉಳಿಸಿ ಬೆಳೆಸುವುದೇ ನಿಜವಾದ ದೇಶ ಪ್ರೇಮ ಎಂದ ಅವರು, ಆ ನಿಟ್ಟಿನಲ್ಲಿ ಮೈಸೂರಿನ ಸಿಐಐಎಲ್ ಸಂಸ್ಥೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.

ಮೈಸೂರು ಮಹಾರಾಜರು, ಶ್ರೀಕೃಷ್ಣ ದೇವ ರಾಯರು ಕಲೆ, ಸಂಸ್ಕøತಿ, ನೃತ್ಯ, ನಾಟಕ, ಸಂಗೀತ ಗಳಿಗೆ ನೀಡಿದ ಪ್ರೋತ್ಸಾಹ, ಅವರು ನಡೆಸಿದ ವಿದ್ವತ್‍ಗೋಷ್ಠಿಗಳನ್ನು ಸ್ಮರಿಸಿದ ಉಪರಾಷ್ಟ್ರಪತಿಗಳು, ಕನ್ನಡ ಭಾಷೆ ಸಂರಕ್ಷಣೆಗೆ ಎಲ್ಲರೂ ಕಂಕಣಬದ್ಧರಾಗ ಬೇಕೆಂದೂ ಇದೇ ಸಂದರ್ಭ ಕಿವಿಮಾತು ಹೇಳಿದರು.

ಭಾರತೀಯರಾದ ನಾವೆಲ್ಲಾ ಒಂದು. `ನಮಸ್ಕಾರ’ ಎಂಬ ಪದದಲ್ಲಿ `ಸಂಸ್ಕಾರ’ ಅಡಗಿದೆ. ನಮ್ಮ ಮಾತೃ ಭಾಷೆ ಮೇಲೆ ಅಭಿಮಾನ ವಿರಲಿ `ವಿವಿಧತೆಯಲ್ಲಿ ಏಕತೆ- ಅದೇ ಭಾರತದ ವಿಶೇಷತೆ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ ವೆಂಕಯ್ಯನಾಯ್ಡು ಅವರು, ಬ್ಯಾಂಕ್, ಪೋಸ್ಟ್ ಆಫೀಸ್, ರೈಲ್ವೆ ಸ್ಟೇಷನ್ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿ ಗಳಲ್ಲಿ ಆಯಾ ಸ್ಥಳೀಯ ಮಾತೃಭಾಷೆಯಲ್ಲೇ ವ್ಯವಹರಿಸುವಂತಾಗಬೇಕು ಎಂದು ನುಡಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಪ್ರತಾಪಸಿಂಹ, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಕೆ.ಆರ್ ಸಿನ್ಹಾ, ಸಿಐಐಎಲ್ ನಿರ್ದೇಶಕ ಪ್ರೊ.ಡಿ.ಜಿ. ರಾವ್, ಸಂಸ್ಥಾಪಕ ನಿರ್ದೇಶಕ ಡಿ.ಪಿ.ಪಟ್ನಾಯಕ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾಷೆಗಳ ಸಂಶೋಧನೆ, ಅಭಿವೃದ್ಧಿಗೆ ಸಿಐಐಎಲ್ ಮಾದರಿಯಾಗಲಿ
ಮೈಸೂರು,ಜು.13(ಆರ್‍ಕೆ)-ಭಾರತೀಯ ಭಾಷಾ ಸಂಸ್ಥೆ (CIIL)ಯು ಭಾಷೆಗಳ ಸಂಶೋ ಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮಾದರಿ ಯಾಗಲಿ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಸಿಐಐಎಲ್ ಆವರಣದಲ್ಲಿ ಇಂದು ಏರ್ಪಡಿಸಿದ್ದ ಸಂಸ್ಥೆಯ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಮ್ಮ ಸಂಪದ್ಭರಿತ ಭಾಷಾ ಪಾರಂಪರಿಕತೆಯನ್ನು ರಕ್ಷಿಸುವಲ್ಲಿ ಭಾರತೀಯ ಭಾಷಾ ಸಂಸ್ಥಾನ ಪ್ರಯತ್ನಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ವೆಂಕಯ್ಯ ನಾಯ್ಡು, ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರ ಹೆಸರು, ಹುದ್ದೆಯನ್ನೂ ಕನ್ನಡದಲ್ಲೇ ಉಲ್ಲೇ ಖಿಸಿದರಲ್ಲದೆ, ‘ಎಲ್ಲರಿಗೂ ನಮಸ್ಕಾರಗಳು, ಭಾರತೀಯ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ತಮಗೆ ಸ್ವರ್ಣ ಜಯಂ ತಿಯ ಶುಭಾಶಯಗಳು’ ಎಂದು ಹೇಳುವ ಮೂಲಕ ಸಭಿಕರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

ವಿಜ್ಞಾನ ಶಿಕ್ಷಣವು ಸಮಾಜ ಅಥವಾ ದೇಶದ ಅಭಿವೃದ್ಧಿಗೆ ಒಂದು ಸಾಧನ. ಆದರೆ ಭಾಷೆಗಳು ಶಿಕ್ಷಣದ ಬ್ಯಾರಿಯರ್ ಆಗಬಾರದು. ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ನೀಡುವುದು ಸೂಕ್ತ. ಈ ಬಗ್ಗೆ ಚರ್ಚೆಗಳು ನಡೆಯಲಿ ಎಂದು ಅವರು ನುಡಿದರು. ಭಾರತೀಯ ಭಾಷೆಗಳಲ್ಲಿ ಹೆಚ್ಚು ಮಂದಿ ಕಥೆ, ಕಾದಂಬರಿ, ನಾಟಕಗಳನ್ನು ಬರೆಯಬೇಕು. ಪ್ರಕಾಶನಗಳು, ಪತ್ರಿಕೆಗಳು ಮತ್ತು ಮಕ್ಕಳ ಪುಸ್ತಕಗಳಿಗೆ ನಾವು ಪ್ರೋತ್ಸಾಹಿಸಬೇಕು ಎಂದ ಉಪ ರಾಷ್ಟ್ರಪತಿಗಳು, ಭಾಷೆಗಳನ್ನು ಪ್ರೋತ್ಸಾಹಿಸುವುದು ಉತ್ತಮ ಆಡಳಿತದ ಅವಿಭಾಜ್ಯ ಅಂಗ ಎಂದರು.ಸಿಐಐಎಲ್‍ನ ಸಂಸ್ಥಾಪಕ ನಿರ್ದೇಶಕರಾದ 90 ವರ್ಷ ವಯ ಸ್ಸಿನ ಡಿ.ಪಿ. ಪಟ್ನಾಯಕ್ ಅವರನ್ನು ವೆಂಕಯ್ಯ ನಾಯ್ಡು ಅವರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸುವ ಮೂಲಕ ಆತ್ಮೀಯವಾಗಿ ಸನ್ಮಾನಿಸಿದರು.

ಅದೇ ವೇಳೆ ಸಂಸ್ಥೆಯು ನಿರ್ಮಿಸಲುದ್ದೇಶಿ ಸಿರುವ ಭುವನೇಶ್ವರದ ಪೂರ್ವ ವಲಯ ಭಾಷಾ ಕೇಂದ್ರ, ಪಾಟಿಯಾಲದ ಉತ್ತರ ವಲಯ ಭಾಷಾ ಕೇಂದ್ರ ಹಾಗೂ ಸೊಲನ್‍ನ ಉರ್ದು ಟೀಚಿಂಗ್ ಸೆಂಟರ್ ಕಟ್ಟಡಗಳಿಗೆ ವೆಂಕಯ್ಯ ನಾಯ್ಡು ಅವರು ಶಂಕುಸ್ಥಾಪನೆ ನೆರವೇರಿಸಿ ದರಲ್ಲದೆ, ಸಂಸ್ಥೆಯು ಹೊರ ತಂದಿರುವ ‘ತೆಲುಗು ಸಿರಿ’ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಶಾಸ್ತ್ರೀಯ ತೆಲುಗು ಕುರಿತ ಜರ್ನಲ್, ಆನ್‍ಲೈನ್ ಟೆಸ್ಟಿಂಗ್ ಅಂಡ್ ಇವ್ಯಾಲ್ಯೂಯೇಷನ್ ಸಿಸ್ಟಂ ಇನ್ ಇಂಡಿಯನ್ ಲ್ಯಾಂಗ್ವೇಜಸ್ ಆ್ಯಪ್ ಮತ್ತು ಆನ್‍ಲೈನ್ ಡೈರೆ ಕ್ಟರಿಯನ್ನೂ ಉಪ ರಾಷ್ಟ್ರಪತಿಗಳು ಇದೇ ಸಂದರ್ಭ ಬಿಡುಗಡೆಗೊಳಿಸಿದರು.

ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನೂ ವೀಕ್ಷಿಸಿದ ಉಪ ರಾಷ್ಟ್ರಪತಿಗಳಿಗೆ ಸಿಐಐಎಲ್ ನ್ಯೂಸ್ ಪೇಪರ್ ವಾಲ್‍ನಲ್ಲಿ ‘ಸ್ಟಾರ್ ಆಫ್ ಮೈಸೂರ್’ ಪತ್ರಿಕೆಯನ್ನು ಸಂಸದ ಪ್ರತಾಪ್ ಸಿಂಹ ತೋರಿಸಿ, ವಿವರ ನೀಡಿದರು.

Translate »