ವಿಶ್ವನಾಥ್, ದೇಶಪಾಂಡೆ ಸೇರಿದಂತೆ ಘಟಾನುಘಟಿಗಳಿಗೆ ಬಿಜೆಪಿ ಗಾಳ
ಮೈಸೂರು

ವಿಶ್ವನಾಥ್, ದೇಶಪಾಂಡೆ ಸೇರಿದಂತೆ ಘಟಾನುಘಟಿಗಳಿಗೆ ಬಿಜೆಪಿ ಗಾಳ

July 4, 2019

ಬೆಂಗಳೂರು, ಜು. 3(ಕೆಎಂಶಿ)- ವೈಯಕ್ತಿಕ ವರ್ಚಸ್ಸು ಹೊಂದಿರುವ ಮತ್ತು ಸಮುದಾಯದ ಪ್ರಭಾವಿ ನಾಯಕರಾದ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್. ವಿಶ್ವನಾಥ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರನ್ನು ಸೆಳೆ ಯಲು ಬಿಜೆಪಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ದಕ್ಷಿಣ ಭಾರತ ದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಬಾಗಿಲು ತೆರೆಯಲು ಆ ಪಕ್ಷದ ವರಿಷ್ಠರೇ ಕಣಕ್ಕಿಳಿದಿದ್ದಾರೆ. ಆಪರೇಷನ್ ಕಮಲವನ್ನು ಅತ್ಯಂತ ತಾಳ್ಮೆ ಹಾಗೂ ವ್ಯವಸ್ಥಿತವಾಗಿ ಅದರಲ್ಲೂ ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ ಅನುಮಾನ ಬರದಂತೆ ಕಾರ್ಯಾಚರಣೆ ನಡೆಸಲು ಎರಡು ಹಂತಗಳನ್ನು ನಿಗದಿಪಡಿಸಲಾಗಿದೆ.

ಮೊದಲ ಹಂತದಲ್ಲಿ ಪಕ್ಷದ ಜೊತೆ ಸಂಪರ್ಕ ಇರುವ ಕಾಂಗ್ರೆಸ್ ಸದಸ್ಯರಿಂದ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ ಉಳಿದವರ ಮೇಲೆ ಒತ್ತಡ ತಂದು ಸೆಳೆಯುವುದು. ಎರಡನೇ ಹಂತದಲ್ಲಿ ಪಕ್ಷವನ್ನು ಕರ್ನಾಟಕದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ವಿವಿಧ ಸಮುದಾಯದ ಕೆಲವು ಪ್ರಭಾವಿಗಳನ್ನು ಸೆಳೆಯುವ ನಿರ್ಧಾರ ಇದಾಗಿದೆ. ಅದರಂತೆ ವಿಶ್ವನಾಥ್, ದೇಶಪಾಂಡೆ ಅಲ್ಲದೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ (ಜೆಡಿಎಸ್), ಆರೋಗ್ಯ ಸಚಿವ ಶಿವಾನಂದ ಪಾಟೀಲ್,ಕಾರ್ಮಿಕ ಸಚಿವ ಪಾವಗಡ ವೆಂಕಟರಮಣಪ್ಪ, ಮಾಜಿ ಸಚಿವರಾದ ಆರ್. ರೋಷನ್ ಬೇಗ್, ರಾಮಲಿಂಗಾರೆಡ್ಡಿ ಬಿಜೆಪಿ ಪಟ್ಟಿಯಲ್ಲಿದ್ದಾರೆ. ಇದಲ್ಲದೆ, ಇನ್ನೂ ಹಲವಷ್ಟು ಮಂದಿಗೆ ಗಾಳ ಹಾಕಿದ್ದು, ಅದರಲ್ಲಿ ಎಷ್ಟು ಯಶಸ್ವಿಯಾಗುತ್ತಾರೆಂದು ಕಾದು ನೋಡ ಬೇಕಿದೆ. ಇದರಲ್ಲಿ ಕೆಲವರು ಈಗಾಗಲೇ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನಿಂದ ಹಲವಷ್ಟು ಶಾಸಕರು ಬಿಜೆಪಿ ಸೇರಲು ಆಸಕ್ತಿಯಿದ್ದರೂ ತಮ್ಮ ವಿಧಾನಸಭಾ ಸದಸ್ಯತ್ವ ಕಳೆದುಹೋಗುವುದೆಂದು ಹಿಂದೇಟು ಹಾಕುತ್ತಿದ್ದಾರೆ. ಅಂತಹವರಿಗೆ ವರಿಷ್ಠರ ಮೂಲಕವೇ ಭರವಸೆ ಕೊಡಿಸುವ ಕೆಲಸ ಸಾಗಿದೆ, ಎಲ್ಲವನ್ನೂ ಅತ್ಯಂತ ಗೌಪ್ಯವಾಗಿ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಹೊರತುಪಡಿಸಿ, ಉಳಿದ ಯಾವುದೇ ನಾಯಕರಿಗೆ ಆಪರೇಷನ್ ಕಮಲದ ಮಾಹಿತಿಯೇ ಇಲ್ಲ.

ಈ ಹಿಂದೆ ಕೆಲವು ರಾಜ್ಯ ನಾಯಕರು ಇಂತಹ ಪ್ರಯತ್ನ ಮಾಡಿ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಅಂತಹದ್ದೇ ಮುಜುಗರ ಮರುಕಳಿಸಬಾರದೆಂಬ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಯಡಿಯೂರಪ್ಪ ಅವರ ತ್ರೀ ಮೆನ್ ಆರ್ಮಿಯನ್ನು ಈ ಚಟುವಟಿಕೆ ಯಿಂದ ಸಂಪೂರ್ಣವಾಗಿ ದೂರ ಇಡಲಾಗಿದೆ.

Translate »