ಮೈತ್ರಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
ಮೈಸೂರು

ಮೈತ್ರಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

November 22, 2018

ಬೆಂಗಳೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡುವ ವರೆಗೂ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗುಡುಗಿದ್ದಾರೆ.
ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟ ಪದ ಗಳನ್ನು ಬಳಸಿದ್ದಾರೆ, ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನ ಕುಮಾರಸ್ವಾಮಿ ರೈತರ ಕ್ಷಮೆ ಕೇಳಬೇಕು.

ಇಲ್ಲವಾದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಕಬ್ಬು ಬೆಳೆ ಗಾರರ ಸಮಸ್ಯೆ ಪರಿಹರಿಸಲು ನಿನ್ನೆಯಿಡೀ ಸಭೆಗಳನ್ನು ನಡೆಸಿ ದರೂ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ಮುಖ್ಯಮಂತ್ರಿ ವಿಫಲ ರಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ಕಬ್ಬು ಬೆಳೆ ಗಾರರ ಬಾಕಿ ಕೊಡಿಸಲು ಕ್ರಮ ಕೈಗೊಳ್ಳಬೇಕು. ಬೆಳಗಾವಿಯಲ್ಲಿ ರೈತರು ಬೀದಿಗೆ ಇಳಿದರೂ, ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದ ಮುಖ್ಯಮಂತ್ರಿ ಉಪಚುನಾವಣೆ ಮುಗಿಯುತ್ತಿದ್ದಂತೆ ಮನೆ ಖಾಲಿ ಮಾಡಿದ್ದಾರೆ.

ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಯಾವ ಸಚಿವರೂ ಅಲ್ಲಿಗೆ ಭೇಟಿ ನೀಡುತ್ತಿಲ್ಲ. ಬರ ಪರಿಹಾರ ಕೆಲಸಗಳು ಆಗುತ್ತಿಲ್ಲ. ಶಾಸಕರ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರ ಇದೇ ಧೋರಣೆ ಮುಂದುವರೆಸಿದರೆ ಬೆಳಗಾವಿಯಲ್ಲಿ ಒಂದು ಲಕ್ಷ ರೈತರನ್ನು ಒಳಗೊಂಡ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಕೃಷಿ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಸಾಲ ಮನ್ನಾ ಮಾಡುವುದಾಗಿ ಹೇಳಿ 6 ತಿಂಗಳಾದರೂ ಸರ್ಕಾರಿ ಆದೇಶ ಹೊರ ಬಿದ್ದಿಲ್ಲ. ಸರ್ಕಾರದ ಬೊಕ್ಕಸ ಖಾಲಿ ಆಗಿದೆ. ನೀರಾವರಿ ಯೋಜನೆಗಳಿಗೆ ಹಣವಿಲ್ಲದಾಗಿದೆ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಇಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಮೈಸೂರಲ್ಲೂ ಬಿಜೆಪಿ ಕಾರ್ಯಕರ್ತರಿಂದ ಧರಣಿ

ರಾಜ್ಯ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಆರೋ ಪಿಸಿ ಬಿಜೆಪಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಮೈತ್ರಿ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ಬಿಜೆಪಿ ವತಿಯಿಂದ ರಾಜ್ಯ ವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಂಡಿದ್ದರ ಭಾಗವಾಗಿ ಮೈಸೂರಿನ ಗಾಂಧಿಚೌಕದಲ್ಲಿ ಬಿಜೆಪಿಯ ಮೈಸೂರು ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ರೈತಪರ ಎಂದು ಬಿಂಬಿಸಿಕೊಂಡು ರೈತ ಸಮುದಾಯದ ಓಟು ಪಡೆದು, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ರೈತರನ್ನು ಗೂಂಡಾಗಳೆಂದು ನಿಂದಿ ಸಿದ್ದಾರೆ. ಇಷ್ಟು ಸಾಲದೆಂದು ರೈತ ಮಹಿಳೆಯೊಬ್ಬರನ್ನು 4 ವರ್ಷ ಎಲ್ಲಿ ಮಲಗಿದ್ದೆ ಎಂದು ಕೀಳಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಮೈತ್ರಿ ಸರ್ಕಾರ ರಚನೆಯಾಗಿ 6 ತಿಂಗಳು ಕಳೆದರೂ ರೈತರ ಸಂಪೂರ್ಣ ಸಾಲ ಮನ್ನಾ ಎಂಬುದು ಭರವಸೆಯಾಗಿಯೇ ಉಳಿದಿದೆ. `ಕುಮಾರಸ್ವಾಮಿ ಬಳಿ ನೋಟು ಪ್ರಿಂಟ್ ಮಾಡುವ ಯಂತ್ರವಿಲ್ಲ’ ಎಂಬ ಅಸಂಬದ್ಧ ಹೇಳಿಕೆಯನ್ನು ಸಿಎಂ ಸಹೋದರರೂ ಆದ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ನೀಡಿದ್ದಾರೆ. ವಿಧಾನ ಸಭೆಯ ಚುನಾವಣೆ ಪೂರ್ವದಲ್ಲಿ ಭರವಸೆ ನೀಡುವಾಗ ಈ ಬುದ್ಧಿ ಇರಲಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಪತ್ತೆಯೇ ಇಲ್ಲ. ಸಕ್ಕರೆ ಸಚಿವರೂ ಕಾಣೆಯಾಗಿದ್ದಾರೆ. ರೈತರ ಸಮಸ್ಯೆಗಳನ್ನು ಪರಿಹರಿಸದೇ ರಾಜ್ಯ ಸರ್ಕಾರ ಉದಾಸೀನತೆಯಿಂದ ನಡೆದುಕೊಳ್ಳುತ್ತಿದೆ. ರೈತರ ಸಾಲ ಮನ್ನಾ ಮಾಡಿ ಅವರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ನೀಡುತ್ತೇವೆ ಎಂದು ಸಿಎಂ ಕುಮಾರ ಸ್ವಾಮಿ ಹೇಳಿದ್ದರು. ಆದರೆ ಇದುವರೆಗೂ ಒಬ್ಬ ರೈತನಿಗೂ ಋಣ ಮುಕ್ತ ಪತ್ರ ನೀಡಿಲ್ಲ. ಸಹಕಾರ ಕ್ಷೇತ್ರದ ಬ್ಯಾಂಕುಗಳಲ್ಲೂ ರೈತರ ಸಾಲಮನ್ನಾ ಆಗಿಲ್ಲ ಎಂದು ಆರೋಪಿಸಿದರು.

ಬೆಂಬಲ ಬೆಲೆ: ರಾಜ್ಯದಲ್ಲಿ ಇದೀಗ ಭತ್ತದ ಕಟಾವು ಆರಂಭಗೊಂಡಿದೆ. ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ರಾಜ್ಯ ಸರ್ಕಾರ ತನ್ನ ಪಾಲಿನ ಬೆಂಬಲ ಬೆಲೆ ಕೊಡಲು ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಮೈತ್ರಿ ಸರ್ಕಾರ ರೈತರ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಧ್ಯಕ್ಷ ಕೋಟೆ ಎಂ.ಶಿವಣ್ಣ, ರೈತರ ಸಾಲ ಮನ್ನಾ ಕೇವಲ ಘೋಷಣೆಯಾಗಿಯೇ ಉಳಿದಿದ್ದು, ಇದುವರೆಗೂ ಒಬ್ಬ ರೈತನ ಸಾಲ ಮನ್ನಾ ಆಗಿಲ್ಲ. ಸಿಎಂ ಕುಮಾರಸ್ವಾಮಿ ರೈತರ ಬಗ್ಗೆ ಉಡಾಫೆಯಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಗದ್ದೆ ನಾಟಿ ಮಾಡುವ ಶೋ ಮಾಡಿ ಬಂದ ಕುಮಾರಸ್ವಾಮಿ ಅವರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುವ ರೈತರನ್ನು ಗೂಂಡಾಗಳೆಂದು ಕರೆಯುತ್ತಾರೆ ಎಂದು ಕಿಡಿಕಾರಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್. ಮಹದೇವಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಸನ್ನಗೌಡ, ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಎ.ಎನ್.ರಂಗು ನಾಯಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹೇಮಂತಕುಮಾರ್‍ಗೌಡ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »