ಹಿಮ್ಮುಖವಾಗಿ ಜಿಗಿದ ಕಾರು: ಮನೆ ಜಗುಲಿ ಮೇಲೆ ಕೂತಿದ್ದ ಮಹಿಳೆ ಸಾವು
ಮೈಸೂರು

ಹಿಮ್ಮುಖವಾಗಿ ಜಿಗಿದ ಕಾರು: ಮನೆ ಜಗುಲಿ ಮೇಲೆ ಕೂತಿದ್ದ ಮಹಿಳೆ ಸಾವು

November 22, 2018

ಚಾಮರಾಜನಗರ: ಹಿಮ್ಮುಖವಾಗಿ ಕಾರೊಂದು ಜಿಗಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡ ದುರಂತ ಚಾಮರಾಜನಗರ ಸಮೀಪದ ಚನ್ನಿಪುರ ಮೋಳೆ ಬಳಿಯ ಹಳೆ ಜಾಲಹಳ್ಳಿ ಹುಂಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಈ ಅಪಘಾತ ಗ್ರಾಮಸ್ಥರಲ್ಲಿ ಮಾತ್ರವಲ್ಲ, ಪೊಲೀಸರಿಗೂ ಆಘಾತ ಉಂಟು ಮಾಡಿದೆ. ಹೀಗೆ ಹಿಮ್ಮುಖವಾಗಿ ಜಿಗಿದಿರುವ ಕಾರು, ಸುಮಾರು 8 ಅಡಿ ಎತ್ತರದ ಮನೆ ಮೇಲ್ಛಾವಣಿ ಮೇಲೆ ನಿಂತಿದೆ. ಕಾರು ಮನೆ ಮುಂದಿನ ಜಗುಲಿ ಮೇಲಿಂದ ಮೇಲ್ಛಾವಣಿ ಮೇಲೇರಿದ್ದು ಹೇಗೆ ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ ತೀವ್ರ ಕುತೂಹಲ ಮೂಡಿದೆ. ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಜಿಗಿದ ವೇಳೆ ಸಹೋದರಿಯರೊಂದಿಗೆ ಜಗುಲಿಯ ಮೇಲೆ ಮಾತನಾಡುತ್ತಾ ಕುಳಿತ್ತಿದ್ದ ಲಕ್ಷ್ಮಮ್ಮ (50) ಅಸುನೀಗಿದರೆ, ಸಾಕಮ್ಮ ಹಾಗೂ ದುಂಡಮ್ಮ ಗಾಯಗೊಂಡಿದ್ದಾರೆ. ಸಾಕಮ್ಮ ಪುತ್ರಿ ಅಪಾಯ ದಿಂದ ಪಾರಾಗಿದ್ದಾರೆ.

ನಿನ್ನೆ ಈ ಕುಟುಂಬ ದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಎಲ್ಲವೂ ಮುಗಿದ ನಂತರ ರಾತ್ರಿ 9.15ರ ಸಂದರ್ಭದಲ್ಲಿ ಲಕ್ಷ್ಮಮ್ಮ, ಸಾಕಮ್ಮ, ದುಂಡಮ್ಮ ಹಾಗೂ ಸಾಕಮ್ಮನ ಪುತ್ರಿ ಮನೆ ಮುಂದಿನ ಜಗುಲಿ ಮೇಲೆ ಲೋಕಾಭಿರಾಮ ವಾಗಿ ಮಾತನಾಡುತ್ತಾ ಕುಳಿತ್ತಿದ್ದರು. ಮನೆ ಮುಂದಿನ ಆವರಣದಲ್ಲಿ ರಾಜಣ್ಣ ಎಂಬುವರು ತಮ್ಮ ಫೋರ್ಡ್ ಐಕಾನ್ ಕಾರನ್ನು ನಿಲ್ಲಿಸಿದ್ದು, ಇದೇ ವೇಳೆ ಅವರು ಕಾರನ್ನು ಹಿಮ್ಮುಖ ವಾಗಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದ್ದಕ್ಕಿದ್ದಂತೆ ಕಾರು ಚಾಲಕನ ನಿಯಂತ್ರಣ ಕಳೆದು ಕೊಂಡು ಹಿಮ್ಮುಖವಾಗಿ ಜಿಗಿದಿದೆ. ಪರಿಣಾಮ ಜಗುಲಿ ಮೇಲೆ ಕೂತಿದ್ದ ಮಹಿಳೆಯರು ಅದ ರಡಿ ಸಿಲುಕಿಕೊಂಡರು. ಈ ವೇಳೆ ಲಕ್ಷ್ಮಮ್ಮ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಅಸು ನೀಗಿದರು. ಇದಾದ ನಂತರವೂ ಕಾರು ಜಗುಲಿ ಯಿಂದ ಮನೆಯ ಮೇಲ್ಛಾವಣಿಗೆ ಜಿಗಿದು, ಅದರ ಹಿಂಭಾಗದ ಚಕ್ರ ಮೇಲ್ಛಾವಣಿ ಮೇಲೆ ನಿಂತಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗಾಯಗೊಂಡ ಸಾಕಮ್ಮ, ದುಂಡಮ್ಮ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸಾಕಮ್ಮ ಪುತ್ರಿ ಯಾವುದೇ ಗಾಯಗಳಿಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ರಾಜಣ್ಣ, ಕಾರಿನ ರಿವರ್ಸ್ ಗೇರ್ ಹಾಕಿ, ಫುಲ್ ಎಕ್ಸಲೇಟರ್ ನೀಡಿ ಬ್ರೇಕ್ ಹಾಕದೇ ಇರುವುದೇ ಈ ದುರಂತಕ್ಕೆ ಕಾರಣ ವಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ ರಾಜಣ್ಣನಿಗೆ ಅಷ್ಟಾಗಿ ಕಾರು ಚಾಲನೆ ಬರುತ್ತಿರಲಿಲ್ಲವೆಂದು ಹೇಳಲಾಗಿದೆ. ಸದ್ಯ ರಾಜಣ್ಣ ದುರಂತ ನಡೆದ ನಂತರ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಸಂಚಾರಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಕೆ.ದೀಪಕ್, ಪಟ್ಟಣ ಪೊಲೀಸ್ ಠಾಣೆ ನಾಗೇಗೌಡ, ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Translate »