ಪುರಭವನ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ
ಮೈಸೂರು

ಪುರಭವನ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ

November 22, 2018

ಮೈಸೂರು: ನಾಡ ಹಬ್ಬ ದಸರಾ ವೇಳೆ ಪ್ರವಾಸಿಗರ ವಾಹನ ನಿಲುಗಡೆಗೆ ಪುರಭವನದಲ್ಲಿ ನಗರಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಇದೀಗ ಸುಲಿಗೆ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ನಗರಪಾಲಿಕೆ ಪುರಭವನದ ಆವರಣದಲ್ಲಿ ನಿರ್ಮಾಣ ಹಂತದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿ, ಅದಕ್ಕೆ ಟೆಂಡರ್ ಕರೆದಿತ್ತು. ಮೈಸೂರಿನ ಮನು ಎಂಬುವವರು ವಾಹನ ನಿಲುಗಡೆ ಹಾಗೂ ನಿರ್ವಹಣೆ ಟೆಂಡರ್ ಪಡೆದಿದ್ದರು. ದ್ವಿಚಕ್ರ ವಾಹನಕ್ಕೆ ದಿನಕ್ಕೆ 10 ರೂ., ನಾಲ್ಕು ಚಕ್ರ ವಾಹನಗಳಿಗೆ ದಿನಕ್ಕೆ 20 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಅ.8 ರಿಂದ 2 ತಿಂಗಳ ಅವಧಿಗೆ ಕರೆಯಲಾಗಿದ್ದ ಟೆಂಡರ್ ಅವಧಿ ಡಿ.10ಕ್ಕೆ ಮುಗಿಯಲಿದೆ. ದಸರಾ ವೇಳೆ ಪಾಲಿಕೆ ವಿಧಿಸಿದ್ದ ಷರತ್ತನ್ನು ಅನು ಸರಿಸಿ ಶುಲ್ಕ ಸಂಗ್ರಹಿಸುತ್ತಿದ್ದ ಗುತ್ತಿಗೆದಾರರು ಇದೀಗ ವಾಹನಗಳ ಪಾರ್ಕಿಂಗ್ ಶುಲ್ಕ ಹೆಚ್ಚಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪುರಭವನ ಆವರಣದ ಪಾರ್ಕಿಂಗ್ ಕಟ್ಟಡದಲ್ಲಿ 2 ಅಂತಸ್ತುಗಳಿದ್ದು, ನೆಲ ಅಂತಸ್ತಿ ನಲ್ಲಿ ಮಳೆ ನೀರು ಹಾಗೂ ಕಸ ಕಡ್ಡಿ ಸೇರಿ ದಂತೆ ತ್ಯಾಜ್ಯ ಸಂಗ್ರಹವಾಗಿರುವುದರಿಂದ ಕೇವಲ ಮೊದಲ ಅಂತಸ್ತಿನಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ನಾಲ್ಕು ಚಕ್ರಗಳ 250 ವಾಹನಗಳನ್ನು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ನಿಲ್ಲಿಸಬಹುದಾಗಿತ್ತು. ದಸರೆ ಸಂದರ್ಭದಲ್ಲಿ ಪಾರ್ಕಿಂಗ್ ಕಟ್ಟಡದಲ್ಲಿ ಹೆಚ್ಚಿನ ವಾಹನಗಳ ನಿಲುಗಡೆ ಮಾಡಿದ್ದರಿಂದ ಪುರಭವನದ ಆವರಣದಲ್ಲಿರುವ ಖಾಲಿ ಜಾಗದಲ್ಲಿಯೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ವಾರಾಂತ್ಯ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಯಾಗಿದ್ದರಿಂದ ಇದೀಗ ಶುಲ್ಕವನ್ನೇ ಹೆಚ್ಚಳ ಮಾಡಲಾಗಿದೆ.

10 ರೂ ಹೆಚ್ಚಳ: ನಾಲ್ಕು ಚಕ್ರಗಳ ವಾಹನ ನಿಲುಗಡೆಯ ಶುಲ್ಕವನ್ನು ಕಳೆದ 15 ದಿನದಿಂದ 30 ರೂ.ಗೆ ಹೆಚ್ಚಿಸಲಾಗಿದೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳನ್ನು ಹೊರತುಪಡಿಸಿ ಸಾಮಾನ್ಯ ದಿನಗಳಲ್ಲಿ ದಿನವೊಂದಕ್ಕೆ 120ರಿಂದ 130 ಕಾರುಗಳನ್ನು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ನಿಲ್ಲಿಸಲಾಗುತ್ತಿದೆ. ಕೆಲವೊಮ್ಮೆ ಪುರಭವನದ ಆವರಣದಲ್ಲೂ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಪಾಲಿಕೆ ನಿಗದಿಪಡಿಸಿದ ಶುಲ್ಕಕ್ಕಿಂತ 10 ರೂ. ಹೆಚ್ಚಾಗಿ ಪಡೆಯುತ್ತಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Translate »