ಬೈ ಎಲೆಕ್ಷನ್ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ.! ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
ಮೈಸೂರು

ಬೈ ಎಲೆಕ್ಷನ್ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ.! ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

November 25, 2019

ಮಂಡ್ಯ,ನ.24(ನಾಗಯ್ಯ)- ಬೈ ಎಲೆಕ್ಷನ್ ಫಲಿತಾಂಶ ಪ್ರಕಟವಾದ ಡಿ.9ರ ಬಳಿಕ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಲೀಡರ್‍ಗಳು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ದೇವರಾಜು ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಬಳಿಕ ರಾಜ್ಯ ರಾಜಕೀಯ ಲೆಕ್ಕಾಚಾರವೇ ಬದಲಾಗುತ್ತದೆ ಎಂಬ ಹೊಸದೊಂದು ಬಾಂಬ್ ಸಿಡಿಸಿದರು. ಉಪಚುನಾವಣೆಯ ಬಳಿಕ ಸರ್ಕಾರ ಉಳಿಯ ಬೇಕಾದರೆ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗುತ್ತದೆ. ಆದರೆ ಬಿಜೆಪಿ ಕೇವಲ 2 ಸ್ಥಾನಗಳಲ್ಲಿ ಗೆಲ್ಲುವುದೇ ಕಷ್ಟ. ಹೀಗಾಗಿ ಸರಕಾರ ಉಳಿಸಿಕೊಳ್ಳಲು ಜೆಡಿಎಸ್ ಮನೆಬಾಗಿಲಿಗೆ ಬಿಜೆಪಿ ಬರಲೇ ಬೇಕಾಗುತ್ತದೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು. ಇದೇ ವೇಳೆ ಬಿಜೆಪಿಯ ಆಂತರಿಕ ಭಿನ್ನಮತದ ಬಗ್ಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವುದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ದೇಶ ಎಂದರು.

ಮೂಗುತಿ, ಸೀರೆ ಹಂಚಿಕೆ, ಬಿಜೆಪಿ ಶಾಲು ಹಾಕ್ಕೊಂಡ್ರೂ ಗೆಲ್ಲಲ್ಲ..!
ಬಿಜೆಪಿಯಿಂದ ಮತದಾರರಿಗೆ ಮೂಗುತಿ, ರಾಡೋ ವಾಚ್, ಸೀರೆ ಹಂಚಿಕೆ ಮಾಡ ಲಾಗುತ್ತಿದೆ. ಅದರಿಂದ ಕೆ.ಆರ್.ಪೇಟೆ ಜನ ಮಾರುಹೋಗಲ್ಲ.

ನಾರಾಯಣಗೌಡರನ್ನು ಮೂರನೇ ಸ್ಥಾನಕ್ಕೆ ತಳ್ಳುತ್ತಾರೆ. ಗಿಮಿಕ್‍ನಿಂದ ರಾಜಕಾರಣ ಮಾಡಲು ಆಗಲ್ಲ. ಒಂದು ಬಿಜೆಪಿ ಶಾಲ್ ಹಾಕಿಸಿಕೊಂಡ್ರೆ ಇಂತಿಷ್ಟು ಹಣ ನೀಡ ಲಾಗುತ್ತಿದೆ ಎಂಬ ವಿಚಾರ 100% ಸತ್ಯ ಎಂದು ಆರೋಪಿಸಿದರು. ಯಡಿಯೂರಪ್ಪ ಅವರಿಗೆ ಸೇಲ್ ಆಗಿದ್ದಾರಲ್ಲ..? ಅವರಿಗೆ ದುಡ್ಡು ಬಂದಿದೆಯಲ್ಲ. ಆ ದುಡ್ಡಿನಲ್ಲಿ ಮತದಾರರನ್ನು ಕೊಂಡುಕೊಳ್ಳಬಹುದು ಎಂದುಕೊಂಡಿದ್ದಾರೆ. ಇಲ್ಲಿಯ ಜನ ಯಾವ ರೀತಿ ಬಾಂಬೆಗೆ ಕಳುಹಿಸುತ್ತಾರೆ ನೋಡಿ ಎಂದು ವ್ಯಂಗ್ಯವಾಡಿದರು. ನಾರಾಯಣ ಗೌಡನಂತಹ ಶಾಸಕನನ್ನು ಕ್ಷೇತ್ರಕ್ಕೆ ತರಬೇಡಿ ಎಂದು ಜನ ನಮಗೆ ಬುದ್ಧಿ ಹೇಳುತ್ತಿದ್ದಾರೆ. ಅದಕ್ಕೆ ನಾವು ಜನರಿಗೆ ಕ್ಷಮೆಯನ್ನು ಕೇಳ್ತಾ ಇದೀವಿ ಎಂದರು.

Translate »