ಜೆ.ಕೆ.ಟೈರ್ಸ್‍ನ 1200ಕ್ಕೂ ಹೆಚ್ಚು ಕಾರ್ಮಿಕರಿಂದ ರಕ್ತದಾನ
ಮೈಸೂರು

ಜೆ.ಕೆ.ಟೈರ್ಸ್‍ನ 1200ಕ್ಕೂ ಹೆಚ್ಚು ಕಾರ್ಮಿಕರಿಂದ ರಕ್ತದಾನ

June 21, 2019

ಮೈಸೂರು, ಜೂ.20(ಎಂಟಿವೈ)- ವಿಶ್ವ ರಕ್ತ ದಿನದ ಹಿನ್ನೆಲೆಯಲ್ಲಿ ಜೆ.ಕೆ.ಟೈರ್ಸ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 1200ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಗಮನ ಸೆಳೆದರು.

ಮೈಸೂರು-ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆ. ಟೈರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ಸಭಾಂಗಣದಲ್ಲಿ ಜೀವಧಾರ ರಕ್ತ ನಿಧಿ ಕೇಂದ್ರ, ಸ್ವಾಮಿ ವಿವೇಕಾನಂದ ರಕ್ತ ನಿಧಿ ಕೇಂದ್ರ, ಲಯನ್ಸ್ ರಕ್ತನಿಧಿ ಕೇಂದ್ರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರಕ್ತದಿನದ ಕಾರ್ಯಕ್ರಮದಲ್ಲಿ ಕಾರ್ಮಿಕರು ರಕ್ತದಾನ ಮಾಡುವ ಮೂಲಕ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರಕ್ತ ಅವಶ್ಯಕತೆ ಯಿರುವ ರೋಗಿಗಳಿಗೆ ನೆರವಾದರು.

ಇದೇ ವೇಳೆ ಜೀವಧಾರ ರಕ್ತ ನಿಧಿಯ ಮುಖ್ಯಸ್ಥ ಗಿರೀಶ್ ಮಾತನಾಡಿ, ಹದಿನೆಂಟು ವರ್ಷ ಮೇಲ್ಪಟ್ಟ ಆರೋಗ್ಯವಂತರು ವರ್ಷಕ್ಕೆ ಎರಡು ಬಾರಿಯಾ ದರೂ ರಕ್ತದಾನ ಮಾಡಿದರೆ ರಕ್ತದ ಕೊರತೆ ನೀಗಿಸಬಹುದು. ಪ್ರಮುಖವಾಗಿ ಪಾಸಿಟಿವ್ ರಕ್ತದ ಗುಂಪುಗಳ ಅಭಾವ ಉಂಟಾಗುತ್ತಿದೆ. ಇಂತಹ ರಕ್ತದ ಗುಂಪುಗಳುಳ್ಳವರು ರಕ್ತನಿಧಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡರೆ ಅವಶ್ಯವಿದ್ದಾಗ ರಕ್ತವನ್ನು ಪಡೆ ಯಲು ನೆರವಾಗುತ್ತದೆ ಎಂದು ತಿಳಿಸಿದರು.

ರಕ್ತದಾನ ಮಾಡಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಯುವಕರು ಹೊರ ಬರಬೇಕು. ರಕ್ತದಾನ ಮಾಡಲು ಭಯ ಪಡುವ ಅಗತ್ಯವಿಲ್ಲ. ರಕ್ತದಾನಕ್ಕೆ ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಮುಂದೆ ಬರ ಬೇಕು. ರಕ್ತದಾನದ ಮಹತ್ವ ಅರಿತರೆ ಎಲ್ಲರೂ ಮುಂದೆ ಬರುತ್ತಾರೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಜೆ.ಕೆ. ಟೈರ್ಸ್ ಮತ್ತು ಇಂಡಸ್ಟ್ರಿಯ ವಿಕ್ರಂ ಹೆಬ್ಬಾರ್ ಮಾತನಾಡಿ, ರಕ್ತ ದಾನ ಮಾಡುವವರನ್ನು ಪೆÇ್ರೀತ್ಸಾ ಹಿಸುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮುಂದಾಗಬೇಕು. ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಶೇ.70ರಷ್ಟು ಮಹಿಳೆಯರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆಯಿದೆ. ಗರ್ಭಿಣಿ ಯರು ಹೆರಿಗೆ ಸಂದರ್ಭದಲ್ಲಿ ರಕ್ತಹೀನತೆಯ ಕೊರತೆ ಅನುಭವಿಸುವುದರಿಂದ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ 16 ಕಾರ್ಮಿಕರು 30ನೇ ಬಾರಿ ರಕ್ತದಾನ ಮಾಡಿದ ದಾಖಲೆ ಬರೆದರು. ಈ ಸಂದರ್ಭದಲ್ಲಿ ಜೆ ಕೆ ಇಂಡಸ್ಟ್ರಿಯ, ಈಶ್ವರ್ ರಾವ್, ಅನಿಲ್ ಕೆ.ಶರ್ಮಾ, ಪ್ರಮೋದ್ ಬಿ ಪಾಟೀಲ್, ರಾಜೀವ್‍ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »