ನೈಸರ್ಗಿಕ ವಿಪತ್ತಿನಿಂದ ನಲುಗಿದ ಕೊಡಗು ಚಿತ್ರಣ ಬಿಂಬಿಸುವ ‘ಕಥೆ ಹೇಳುವೆ ನನ್ನ’ ಕೃತಿ ಲೋಕಾರ್ಪಣೆ
ಮೈಸೂರು

ನೈಸರ್ಗಿಕ ವಿಪತ್ತಿನಿಂದ ನಲುಗಿದ ಕೊಡಗು ಚಿತ್ರಣ ಬಿಂಬಿಸುವ ‘ಕಥೆ ಹೇಳುವೆ ನನ್ನ’ ಕೃತಿ ಲೋಕಾರ್ಪಣೆ

December 15, 2018

ಮೈಸೂರು: ಪುಸ್ತಕ ಬಿಡು ಗಡೆ ಎಂದರೆ ಕೃತಿಕಾರ, ಮುದ್ರಕ, ಪ್ರಕಾಶ ಕರು ಹಾಗೂ ಅವರ ಕುಟುಂಬ, ಸ್ನೇಹಿತರು, ಹಿತೈಷಿಗಳಲ್ಲಿ ಸಂತಸ, ಸಂಭ್ರಮವಿರುತ್ತದೆ.

ಆದರೆ ಮೈಸೂರಿನಲ್ಲಿ ಇಂದು ನಡೆದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದುಃಖ, ದುಮ್ಮಾನ, ಭಾರವಾದ ಮನಸುಗಳು ಒಂದೆಡೆ ಸೇರಿ ಒಂದು ರೀತಿಯ ಸ್ಮಶಾನ ಮೌನ ಮನೆ ಮಾಡಿತ್ತು. ಶ್ರದ್ಧಾಂಜಲಿ ಕಾರ್ಯಕ್ರಮ ಗಳಲ್ಲೂ ದುಃಖದ ಜೊತೆ ಒಂದಿಷ್ಟು ಹಸ ನ್ಮುಖಿ ಮನಸುಗಳನ್ನು ಕಾಣಲು ಸಾಧ್ಯ. ಆದರೆ ‘ಭೂತಾಯಿ ಆಕಳಿಸಿ ಮೈಮುರಿದಾಗ’ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ತತ್ತರಿಸಿದ ನೆರೆಯ ಕೊಡಗು ಜಿಲ್ಲೆಯಲ್ಲಿನ ಚಿತ್ರಣ ಬಿಂಬಿಸುವ ಪತ್ರಕರ್ತ ರವಿ ಪಾಂಡವ ಪುರ ಅವರ ‘ಕಥೆ ಹೇಳುವೆ ನನ್ನ’ ಕೊಡ ಗಿನ ನೊಂದ ಹೃದಯಗಳು… ಮಿಡಿದ ಮನಗಳು ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ನೀರವ ಮೌನ ಆವರಿಸಿತ್ತು.

ಅಭಿರುಚಿ ಪ್ರಕಾಶನದಿಂದ ಪ್ರಕಟಿಸಿರುವ ‘ಕಥೆ ಹೇಳುವೆ ನನ್ನ’ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೊಡಗಿನ ಸಂತ್ರಸ್ತರ ಕುರಿತಾದ ಕೃತಿಯನ್ನು ಮೈಸೂರಿನ ಮಾನಸಗಂಗೋ ತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ದುರಂತದ ನಿರಾಶ್ರಿತರಾಗಿ ಪುತ್ರಿ ಕಳೆದು ಕೊಂಡ ಮೃತ ಮಂಜುಳಾ ತಂದೆ ಸೋಮಯ್ಯ ಅವರು ಬಿಡುಗಡೆ ಮಾಡಿದರು.

ಪತ್ನಿ ಶ್ರೀಮತಿ ಕೆ.ಎಸ್.ಜಯಂತಿ, ಪುತ್ರ ರಾದ ಕೆ.ಎಸ್.ದರ್ಶನ್ ಹಾಗೂ ಕೆ.ಎಸ್. ರೋಷನ್ ಸಹ ಭಾರವಾದ ಹೃದಯ ದಿಂದಲೇ ಸೋಮಯ್ಯರೊಂದಿಗೆ ಪುಸ್ತಕ ಬಿಡುಗಡೆಯಲ್ಲಿ ಕೈಜೋಡಿಸಿದರು.

ನಿಸರ್ಗ ವಿಕೋಪದಿಂದ ಕಲ್ಲು ಬಂಡೆ -ಮಣ್ಣಿನ ರಾಶಿಯಲ್ಲಿ ಸಿಲುಕಿ ಸಾವನ್ನ ಪ್ಪಿದ ಮಂಜುಳಾ ಮೃತದೇಹ ಸಹ ಪತ್ತೆ ಯಾಗದಿರುವುದನ್ನು ನೆನೆದು ಈ ಕುಟುಂಬ ವೇದಿಕೆಯಲ್ಲೇ ಕಣ್ಣೀರಿಟ್ಟ ದೃಶ್ಯ ಇಡೀ ಸಭಾಂಗಣದಲ್ಲಿ ನೆರೆದಿದ್ದವರ ಮನ ಕಲಕುವಂತೆ ಮಾಡಿತು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಅಧ್ಯಕ್ಷತೆ ವಹಿ ಸಿದ್ದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ.ಪನ್ನೇಕರ್ ಭಾಗವಹಿಸಿ ಪ್ರಕೃತಿ ವಿಕೋಪ ಸಂದರ್ಭ ತಮಗಾದ ಅನುಭವ, ಎದು ರಾದ ಸವಾಲುಗಳು, ಜನಪ್ರತಿನಿಧಿಗಳು, ಸ್ಥಳೀಯರು, ಪೊಲೀಸ್ ಹಾಗೂ ಇತರ ಇಲಾಖೆ ಅಧಿಕಾರಿ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳ ಸಹಕಾರ, ಮೆರೆದ ಮಾನವೀ ಯತೆಯ ಬಗ್ಗೆ ಮನ ಬಿಚ್ಚಿ ಮಾತನಾಡಿದರು.

ಕೃತಿ ಲೇಖಕರಾದ ಪತ್ರಕರ್ತ ರವಿ ಪಾಂಡವ ಪುರ ಅವರು ಮೈಕ್ ಮುಂದೆ ನಿಂತು ಗದ್ಗ ದಿತರಾಗಿ ತಾವು ಪುಸ್ತಕ ಬರೆಯಲು ಪ್ರೇರಣೆ ನೀಡಿದ ಘಟನಾವಳಿಗಳು, ಪ್ರೋತ್ಸಾ ಹಿಸಿದ ಪತ್ರಕರ್ತ ಗೆಳೆಯರು, ಮುದ್ರಣ ಮಾಡಲು ಪ್ರಕಾಶಕರು ತೋರಿದ ಔದಾರ್ಯದ ಬಗ್ಗೆ ತಿಳಿಸಿದರು. ಪುಸ್ತಕ ಪರಿಚಯ ಮಾಡಿದ ಹಿರಿಯ ಪತ್ರಕರ್ತ ಅನಂತ ಚಿನಿವಾರ್, ಕೊಡಗಿನ ಸ್ಥಿತಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ಕ್ರಿಯಿಸಿದರೆ, ಪ್ರಕಾಶಕ ಅಭಿರುಚಿ ಗಣೇಶ್ ಅವರು ಗಣ್ಯರನ್ನು ಸ್ವಾಗತಿಸಿದರು.

128 ಪುಟಗಳ ‘ಕಥೆ ಹೇಳುವೆ ನನ್ನ-ಕೊಡಗಿನ ನೊಂದು ಹೃದಯಗಳು…. ಮಿಡಿದ ಮನೆಗಳು’ ಪುಸ್ತಕದ ಬೆಲೆ 105 ರೂ. ಗಳಾಗಿದ್ದು, ಅದರ ಮಾರಾಟದಿಂದ ಬಂದ ಹಣವನ್ನು ಕೊಡಗಿನ ಸಂತ್ರಸ್ತರ ಸಹಾಯ ನಿಧಿಗೆ ಸಮರ್ಪಿಸುವುದಾಗಿ ಗಣೇಶ್ ಇದೇ ವೇಳೆ ಪ್ರಕಟಿಸಿದರು. ಕಾರ್ಯಕ್ರಮದ ಆರಂಭ ದಲ್ಲಿ ಕೊಡಗು ನೈಸರ್ಗಿಕ ವಿಕೋಪದಿಂದ ಸಾವನ್ನಪ್ಪಿದವರಿಗೆ 2 ನಿಮಿಷ ಮೌನಾ ಚರಣೆ ಮಾಡುವ ಮೂಲಕ ಸಂತಾಪ ಸೂಚಿಸ ಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ನಗರ ಕಾರ್ಯದರ್ಶಿ ಬಿ.ರಾಘವೇಂದ್ರ, ಪದಾಧಿಕಾರಿ ಗಳು, ಮೈಸೂರು ವಿವಿ ಪತ್ರಿಕೋದ್ಯಮ ವಿಭಾ ಗದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿದ್ದರು.

ಎಷ್ಟು ಹುಡುಕಾಡಿದರೂ ನನ್ನ ಮಗಳ ಮೃತದೇಹ ಸಿಗಲೇ ಇಲ್ಲ…!
ಮೈಸೂರು: ಆಗಸ್ಟ್ 17ರಂದು ಸಂಭ ವಿಸಿದ ಬೋರ್ಗರೆಯುವ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ ಪುತ್ರಿ ಮಂಜುಳಾ ಮೃತದೇಹವೂ ಸಿಗಲಿಲ್ಲ. ಪ್ರೀತಿಯ ಮಗಳ ಕಳೇಬರವನ್ನಾದರೂ ಈಗ ನೋಡುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆ ತಂದೆ ಕೊಡಗು ಜಿಲ್ಲೆ ಬೆಟ್ಟತ್ತೂರಿನ ಕುಡಿಯರ ಸೋಮಯ್ಯರದ್ದಾಗಿದೆ.

ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಪತ್ರಕರ್ತ ರವಿ ಪಾಂಡವಪುರ ಅವರು ಬರೆದಿರುವ `ಕಥೆ ಹೇಳುವೆ ನನ್ನ ಕೊಡಗಿನ ನೊಂದ ಹೃದಯಗಳು… ಮಿಡಿದ ಮನಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಬುಡಕಟ್ಟು ಕುಟುಂಬದವರಾದ ನನ್ನ ಹುಟ್ಟೂರಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ ಇದ್ದ ಕಾರಣ, ನನ್ನ ಸೋದ ರತ್ತೆ ಗೌರಮ್ಮ ಅವರ ಜೋಡುಪಾಲದಲ್ಲಿ ಪುತ್ರಿ ಮಂಜುಳಾಳನ್ನು ಬಿಟ್ಟಿದ್ದೆ. ಅಲ್ಲಿನ ಮದೆ ಮಹೇಶ್ವರ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಆಕೆಯನ್ನು ಆಗಸ್ಟ್ 17ರ ರಣ ಮಳೆ ಬಲಿ ತೆಗೆದು ಕೊಂಡಿತು ಎಂದು ಹೇಳುವಾಗ ಸೋಮಯ್ಯರ ಕಣ್ಣಂಚಿನಲ್ಲಿ ನೀರಾಡಿತು.

ಮಳೆ ಬಂದಾಗ ಮಗಳನ್ನು ಊರಿಗೆ ಕಳಿಸುವಂತೆ ನಾನು ಗೌರಮ್ಮಗೆ ಕರೆ ಮಾಡಿ ಹೇಳಿದ್ದೆ. ಆದರೆ ಇದು ಮಾಮೂಲಿ ಮಳೆಯಲ್ಲವೆ, ಮೂರು ದಿನ ಬಂದು ನಿಲ್ಲುತ್ತದೆ ಎಂದು ಸಮಾಧಾನ ಹೇಳಿ ಮಂಜುಳಾಳನ್ನು ಜೋಡುಪಾಲದಲ್ಲೇ ಇರಿಸಿಕೊಂಡಿದ್ದರು. ತಡ ರಾತ್ರಿ ಮಳೆ ರಭಸ ಹೆಚ್ಚಾಗಿ ಮನೆಯಲ್ಲಿದ್ದ ಗೌರಮ್ಮ, ಪತಿ ಬಸಪ್ಪ, ಪುತ್ರಿ ಮೋನಿಕಾ ಹಾಗೂ ತನ್ನ ಪುತ್ರಿ ಮಂಜುಳಾ ಎಲ್ಲರೂ ಕೊಚ್ಚಿ ಹೋದರು ಎಂದರು.

ವಿಷಯ ತಿಳಿಯುತ್ತಿದ್ದಂತೆಯೇ ನಾವು ಅಲ್ಲಿಗೆ ಹೋಗಲು ಯತ್ನಿಸಿದೆವಾದರೂ ಮಣ್ಣು ಗುಡ್ಡೆ ಕುಸಿದಿದ್ದರಿಂದ ತ್ರಾಸ ಪಟ್ಟು ಸ್ಥಳಕ್ಕೆ ಧಾವಿಸಿದೆವಾದರೂ ಅಲ್ಲಿ ಮನೆಯೂ ಇರ ಲಿಲ್ಲ; ನಮ್ಮವರ್ಯಾರೂ ಕಾಣಿಸಲಿಲ್ಲ. ಕಡೆಗೆ ಆಗಸ್ಟ್ 24 ರಂದು ಗೌರಮ್ಮ ಮೃತದೇಹ ಸಿಕ್ಕಿತು. ಕೊಳೆತಿದ್ದ ದೇಹ ದಿಂದ ಕಣ್ಣೆದುರೇ ಆಕೆಯ ಒಂದು ಕಾಲು ಕಳಚಿ ಬಿದ್ದಿತು ಎಂದು ಸೋಮಯ್ಯ ಕಣ್ಣಾರೆ ಕಂಡ ದೃಶ್ಯವನ್ನು ವಿವರಿಸಿದರು.

ಆದರೆ ಪೊಲೀಸರೊಂದಿಗೆ ನಾವು ಮೃತದೇಹಕ್ಕಾಗಿ ಹುಡುಕಾಡಿದೆವಾದರೂ ಮಗಳ ಮೃತದೇಹ ಸಿಗಲಿಲ್ಲ. 15 ದಿನಗಳ ನಂತರ ಅಲ್ಲಿ ಒಂದು ಮೂಳೆ ಸಿಕ್ಕಿತು. ನನ್ನ ಮಗಳ ಮೃತದೇಹ ಸಿಗುತ್ತದೆ ಎಂಬ ಆಸೆ ಇತ್ತು. ಪ್ರಯೋ ಗಾಲಯದಿಂದ ವರದಿ ಬಂದ ನಂತರ ಅದು ಪ್ರಾಣಿಯ ಮೂಳೆ ಎಂದು ತಿಳಿದಾಗ ನಾವು ದುರಾದೃಷ್ಟವಂತರು ಎಂದು ಹೇಳಿ ಸುಮ್ಮನಾದೆವು. ಮೃತದೇಹಕ್ಕಾಗಿ ಶೋಧಿಸುತ್ತಿದ್ದೇವೆ ಎಂದು ಸರ್ಕಾರದವರು ಹೇಳುತ್ತಿ ದ್ದಾರೆ. ಇನ್ನೆಲ್ಲಿ ನನ್ನ ಮಗಳು ಎಂದು ದುಃಖತಪ್ತರಾದರು.
ಎಸ್‍ಪಿ ಸುಮನ ಡಿ. ಪಣ್ಣೇಕರ್ ಅವರು ಮಾತನಾಡಿ, ಕೊಡಗು ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡು ಆಗಷ್ಟೇ 1 ತಿಂಗಳಾಗಿತ್ತು. ಪ್ರಕೃತಿ ವಿಕೋಪದಂತಹ ಸಂದರ್ಭ ನನಗೆ ಹೊಸ ಅನುಭವ ಹಾಗೂ ಸವಾಲಾಯಿತು. ಆಗಸ್ಟ್ 16 ರಂದು ಮಳೆ ಜಾಸ್ತಿಯಾಗುತ್ತಿದ್ದಂತೆಯೇ ಜನರಿಂದ ದೂರವಾಣಿ ಕರೆಗಳು ಬರಲಾರಂಭಿಸಿದವು.

ನೀರು ನುಗ್ಗುತ್ತಿದೆ. ಬಂಡೆಗಳು ಉರುಳುತ್ತಿವೆ. ಮನೆ ಗಳು ಕೊಚ್ಚಿ ಹೋಗುತ್ತಿವೆ ಎಂಬ ಮಾಹಿತಿಗಳು ಬರ ಲಾರಂಭಿಸಿದಾಗ ನಾವು ರಕ್ಷಣಾ ಕಾರ್ಯದಲ್ಲಿ ತೊಡ ಗಿದೆವು. ಮೊದಲು ಬದುಕುಳಿದವರನ್ನು ರಕ್ಷಿಸಿದೆವು. ನಂತರವಷ್ಟೇ ಸಾವನ್ನಪ್ಪಿದವರ ಕಳೇಬರಗಳನ್ನು ಅವ ಶೇಷದಡಿಯಿಂದ ತೆಗೆಯಲಾರಂಭಿಸಿದೆವು ಎಂದು ಪಣ್ಣೇಕರ ಅವರು ನುಡಿದರು.

ಸೆಪ್ಟೆಂಬರ್ 3ರವರೆಗೂ ಮೃತದೇಹ ಪತ್ತೆ ಕಾರ್ಯ ನಡೆಸಿದೆವು. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳು ಸಹ ವಿಪತ್ತು ಸ್ಥಳದಲ್ಲಿ ಹಾಜರಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ನನಗೆ ಆ ಘಟನೆ ಒಂದು ವಿಶೇಷ ಅನುಭವವೇ ಸರಿ. ರವಿ ಪಾಂಡವಪುರ ಅವರು ಬರೆದಿರುವ ಈ ಪುಸ್ತಕ ಅಂದಿನ ಘಟನಾವಳಿಯ ನೈಜ ಸಂಗತಿಯನ್ನು ಕಣ್ಮುಂದೆ ಬರುವಂತೆ ಮಾಡುತ್ತದೆ ಎಂದು ನುಡಿದರು.

ಪುಸ್ತಕ ಪರಿಚಯ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಅನಂತ ಚಿನಿವಾರ್ ಅವರು, ಮಹಾಮಳೆ ಯಿಂದ ಪ್ರಾಣ, ಭೂಮಿ ಕಳೆದುಕೊಂಡವರ ಕುಟುಂಬ ಗಳಿಗೆ ಕೇವಲ ಪರಿಹಾರ ಧನ ನೀಡಿ ಮನೆ ಕಟ್ಟಿ ಕೊಟ್ಟರೆ ಸಾಲದು, ಅವರಿಗೆ ಕೃಷಿ ಭೂಮಿ ಒದಗಿಸಿ ಬದುಕು ಕಟ್ಟಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

Translate »