ಮೈಸೂರಿನ ಎನ್.ಧ್ರುವರಾಜ್ ಸೇರಿ 25 ಮಂದಿಗೆ `ಪರಿವರ್ತನ ಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ
ಮೈಸೂರು, ಸೆ.11(ಪಿಎಂ)- ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಸೆ.22ರಂದು ಬೆಂಗಳೂರಿನಲ್ಲಿ ಶ್ರೀ ನಾರಾ ಯಣಗುರು ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಬೆಳಿಗ್ಗೆ 10ಕ್ಕೆ ಜಯಂತ್ಯೋತ್ಸವವನ್ನು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ನಾರಾ ಯಣಗುರುಗಳ ಭಾವಚಿತ್ರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಶ್ರೀ ನಾರಾಯಣಗುರು ಕೋ-ಆಪರೇಟಿವ್ ಸೊಸೈಟಿಗೆ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಧರ್ಮಸ್ಥಳದ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನಮ್‍ನ ಮಠಾಧೀಶ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಸಾನಿಧ್ಯ ವಹಿಸಲಿದ್ದಾರೆ. ಇದೇ ವೇಳೆ ಮೈಸೂರಿನ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನ ನಿರ್ದೇಶಕ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರೂ ಆದ ಎನ್.ಧ್ರುವರಾಜ್ ಸೇರಿದಂತೆ 25 ಮಂದಿ ಸಾಧಕರಿಗೆ `ಪರಿವರ್ತನ ಶ್ರೀ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಸಮುದಾಯದ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಗುವುದು ಎಂದರು.
ಈಡಿಗ ಬಿಲ್ಲವ ಸಮಾಜದ 26 ಉಪಜಾತಿಗಳನ್ನು ಒಳಗೊಂಡಂತೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ನಮ್ಮ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣಗುರು ಅವರ ಹೆಸರು ನಾಮಕರಣ ಮಾಡಬೇಕು. ಸಮುದಾಯದ ಬಡ ಜನರಿಗೆ ನಿವೇಶನ ಹಾಗೂ ಮನೆ ಮಂಜೂರು ಮಾಡಬೇಕು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲ್ಲೊಡ್ಡು ಡ್ಯಾಮ್ ಯೋಜನೆ ಕೈ ಬಿಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಇದೇ ವೇಳೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಂಘದ ಸದಸ್ಯರಾದ ವೆಂಕಟರಾಜು, ದೀಪಕ್‍ಕುಮಾರ್ ಗೋಷ್ಠಿಯಲ್ಲಿದ್ದರು.