ಮೈಸೂರು,ಸೆ.11(ಎಂಟಿವೈ)- ಮಾನವನ ಸಮೃದ್ಧ ಜೀವನಕ್ಕೆ ಪರಿಸರ ಸಮತೋಲನ ಕಾಪಾಡುವುದು ಅಗತ್ಯವಾಗಿದ್ದು, ಪ್ರಾಣಿ-ಪಕ್ಷಿಗಳೊಂದಿಗೆ ಸಮಸ್ತ ಜೀವ ಸಂಕುಲದ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸುವಂತೆ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಸಲಹೆ ನೀಡಿದ್ದಾರೆ.
ಮೈಸೂರಿನ ಅಶೋಕಪುರಂ ಅರಣ್ಯ ಭವನದ ಆವ ರಣದಲ್ಲಿರುವ ಲೇ.ವೆಂಕಟಸ್ವಾಮಿ ಉದ್ಯಾನವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ 1966ರಿಂದ 2018ರವರೆಗೆ ರಾಜ್ಯದ ವಿವಿಧೆಡೆ ಕರ್ತವ್ಯದ ವೇಳೆ ಹುತಾತ್ಮರಾದ 47 ಅರಣ್ಯ ಸಿಬ್ಬಂದಿ ಆತ್ಮಕ್ಕೆ ಶಾಂತಿಕೋರಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಹಸಿರು ಸೇನೆ ಎನಿಸಿರುವ ಅರಣ್ಯ ಸಿಬ್ಬಂದಿ ಕಾರ್ಯ ಶ್ಲಾಘ ನೀಯ. ಕರ್ತವ್ಯ ವೇಳೆ ಇದುವರೆಗೂ ತಮ್ಮ ಜೀವ ವನ್ನೇ ತ್ಯಾಗ ಮಾಡಿರುವ 47 ಮಂದಿ ಸಿಬ್ಬಂದಿ ಸೇವೆ ಯನ್ನು ಸ್ಮರಿಸಿ, ಗೌರವಿಸಬೇಕು. ಪೊಲೀಸರಾಗಲೀ ಅಥವಾ ಅರಣ್ಯ ಸಿಬ್ಬಂದಿಗಳಾಗಲೀ ಹುತಾತ್ಮರಾದಾಗ ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೀಮಿತ ಸಂಖ್ಯೆಯಲ್ಲಿದ್ದರೂ ಮಹತ್ವದ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಹೊಣೆಗಾರಿಕೆಯೊಂದಿಗೆ ಅರಣ್ಯದ ಕಾವಲುಗಾರರು ಎನಿಸಿರುವ ನಿಮ್ಮ ಸೇವೆ ಶ್ರೇಷ್ಠ ಎಂದು ಗುಣಗಾನ ಮಾಡಿದರು.
1730ರ ಸೆ.11ರಂದು ಜೋಧ್‍ಪುರ್‍ನ ಮಹಾ ರಾಜ ಅಭಯಸಿಂಗ್ ಎಂಬಾತ ಕೇರ್ಜಿ ಪ್ರಾಂತ್ಯದಲ್ಲಿ ಅರಮನೆ ಕಟ್ಟಲು ಅಲ್ಲಿದ್ದ ಕೇರ್ಜಿ ಮರಗಳನ್ನು ಕಡಿ ಯಲು ಮುಂದಾದಾಗ ಅಲ್ಲಿನ `ಬೀಷ್ಣೋಯಿ’ ಬುಡ ಕಟ್ಟು ಜನಾಂಗದ ಅಮೃತಾದೇವಿ ಎಂಬ ಮಹಿಳೆ ಈ ಮರಗಳ ಹನನ ತಡೆಯಲು ಮುಂದಾದರು. ನಮ್ಮಲ್ಲಿ ಬನ್ನಿ ಮರದಂತೆ ಅಲ್ಲಿನ ಕೇರ್ಜಿ ಮರ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಅಮೃತಾದೇವಿ ಪ್ರತಿಭಟನೆ ಮಾಡಿ ದರು. ಈ ವೇಳೆ 360ಕ್ಕೂ ಹೆಚ್ಚು ಜನರು ಕೇರ್ಜಿ ಮರಗಳನ್ನು ಅಪ್ಪಿಕೊಂಡರು. ಆದರೆ ಆ ಮಹಾರಾಜ ಸೈನಿಕರ ಮೂಲಕ ಪ್ರತಿಭಟನೆಯಲ್ಲಿ ತೊಡಗಿದ್ದ 363 ಜನರ ಹತ್ಯೆ ಮಾಡಿಸಿದ. ಈ ದಿವಸವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾಯಕತ್ವ ಎಂಬುದು ಯಾರಲ್ಲಾದರೂ, ಯಾವಾಗ ಬೇಕಾದರೂ ಹೊರ ಹೊಮ್ಮುತ್ತದೆ. ಬೀಷ್ಣೋಯಿ ಬುಡಕಟ್ಟು ಮಹಿಳೆಯೊಬ್ಬರಿಂದ ಆರಂಭವಾದ ಹೋರಾಟವಾಗಿದ್ದು, ಅಪ್ಪಿಕೊ ಚಳವಳಿಯಂತಹ ಹಲವು ಚಳವಳಿಗೆ ಪ್ರೇರಣೆಯಾಯಿತು ಎಂದರು.
ಜಾಗೃತಿ ಅಗತ್ಯ: ಅರಣ್ಯ ಸಂಪತ್ತಿನ ಸಂರಕ್ಷಣೆ ಕುರಿತಂತೆ ಪಠ್ಯಕ್ರಮಗಳಲ್ಲಿ ಸಾಕಷ್ಟು ಮಾಹಿತಿ ಒದಗಿಸಲಾಗು ತ್ತಿದೆ. ಆದರೆ ಅಗತ್ಯ ಸಂದರ್ಭದಲ್ಲಿ ವನ್ಯ ಸಂಪತ್ತಿನ ಬಗೆಗಿನ ಕಾಳಜಿಯ ಸಂವೇದನಾ ಶೀಲತೆ ಜಾಗೃತ ವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ. ಮಾನವನ ಸಮೃದ್ಧ ಜೀವನಕ್ಕೆ ಅರಣ್ಯ ಸಂರಕ್ಷಣೆ, ಸುತ್ತಮುತ್ತಲಿನ ಪರಿಸರ ರಕ್ಷಣೆ ಅಗತ್ಯವಾಗಿದೆ. ಭೂಮಿ ಮೇಲೆ ಕೇವಲ ಮನುಷ್ಯರು ಇದ್ದರೆ ಮಾತ್ರ ಸಾಲದು. ಮನುಷ್ಯರೊಂದಿಗೆ ಪಶು, ಪಕ್ಷಿ, ಪ್ರಾಣಿ ಸಂಕುಲ, ಕೀಟ ಗಳೊಂದಿಗೆ ಜೀವ ವೈವಿಧ್ಯತೆಯೂ ಇರಬೇಕು. ಇದಕ್ಕಾಗಿಯೇ ದೇವರು ಜೀವ ಸಂಕುಲವನ್ನು ಸೃಷ್ಟಿಸಿ ದ್ದಾನೆ. ದೇವರ ಆಸೆ ವಿರುದ್ಧ ನಾವು ಹೋಗಬಾರದು. ಸಮತೋಲನ ಕಾಪಾಡಿಕೊಳ್ಳುವುದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಇದೇ ವೇಳೆ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಅವರು ಕಳೆದ 52 ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯದ ವೇಳೆ ಮಡಿದ 47 ಅರಣ್ಯ ಸಿಬ್ಬಂದಿಯ ಹೆಸರನ್ನು ಓದುವ ಮೂಲಕ ಎಲ್ಲಾ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರುವುದಾಗಿ ಹೇಳಿ ದರು. ಬಳಿಕ ಹಿರಿಯ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸೂಚಿಸಿ ದರು. ಈ ಸಂದರ್ಭದಲ್ಲಿ ಪೊಲೀಸ್ ತುಕಡಿ ಗಾಳಿ ಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಪಿಸಿಸಿಎಫ್ ಜಗತ್‍ರಾಮ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಎಸ್‍ಪಿ ಕ್ಷಮಾ ಮಿಶ್ರ, ಸಿಸಿಎಫ್ ಟಿ.ಹೀರಾಲಾಲ್, ಡಿಸಿಎಫ್‍ಗಳಾದ ಅಲೆ ಗ್ಸಾಂಡರ್, ಪೂವಯ್ಯ, ಭಾನುಪ್ರಕಾಶ್ ಉಪಸ್ಥಿತರಿ ದ್ದರು. ಕಾರ್ಯಕ್ರಮದ ಬಳಿಕ ಡಿಸಿಎಫ್ ಶ್ರೀನಿವಾಸ್ ಹಾಗೂ ಸಿಎಫ್ ಮಣಿಕಂದನ್ ಅವರ ಭಾವಚಿತ್ರಕ್ಕೆ ಅರಣ್ಯ ಸಿಬ್ಬಂದಿ, ಕುಟುಂಬದ ಸದಸ್ಯರು ಪುಷ್ಪಾ ರ್ಚನೆ ಮಾಡಿ ನಮಿಸಿದರು.