ಮೈಸೂರು,ಡಿ.1(ಆರ್‍ಕೆಬಿ)- ವಿದ್ಯಾರ್ಥಿಗಳು ಮಾಡುವ ಸಂಶೋಧನೆಗಳ ಪುಸ್ತಕ ತರುತ್ತಿದ್ದೇವೆ ಎಂಬುದು ಒಂದು ಭಾಗವಾದರೆ, ವಿವಿಯ ಪ್ರಗತಿ ತೋರಿಸಲು ಉತ್ತಮ ಸಂಶೋಧನಾ ಲೇಖನಗಳನ್ನು ನ್ಯಾಕ್ ಅಥವಾ ಇನ್ನಾವುದೇ ಸಂಸ್ಥೆಗಳು ಕೇಳುತ್ತವೆ. ಇದರಿಂದ ವಿವಿಗೆ ಮತ್ತು ವಿಭಾಗಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಈ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಮೈಸೂರು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ `ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಪ್ರಸ್ತಾವನೆ ಅನಾ ವರಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವವಿದ್ಯಾನಿಲಯಕ್ಕೆ ಕಳೆದ ಜನವರಿ 2ರಂದು ನ್ಯಾಕ್ ಬಂದಿತ್ತು. ಈಗ ಅದರ ಅವಧಿ ಮುಗಿಯಲಿದ್ದು, ಇನ್ನು ಆರು ತಿಂಗಳಿಗೆ ನ್ಯಾಕ್‍ಗಾಗಿ ಅಂಕಗಳನ್ನು ತೆಗೆಯಬೇಕಾಗಿದೆ. ಹೀಗಾಗಿ ಶೈಕ್ಷಣಿಕ ವ್ಯವಸ್ಥೆಯ ಮುಖ್ಯ ಭಾಗವಾಗಿರುವ ಸಂಶೋಧನಾ ವಿದ್ಯಾರ್ಥಿಗಳು ಗಂಭೀರ ಮತ್ತು ಋಣಾತ್ಮಕ ಸಂಶೋಧನೆಯಿಂದ ವಿವಿಗೆ ಕೀರ್ತಿ ತರುವಂತೆ ಮನವಿ ಮಾಡಿದರು.
ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ್ ಮಾತನಾಡಿ, ಸಂವಿಧಾನ ದಿನವನ್ನು ಆಚರಿಸುವಂತೆ 2015ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ದೇಶಾದ್ಯಂತ ನ.26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ ಎಂದು ಸಂವಿಧಾನ ರಚನೆ, ಅದರ ಕಾರಣಕರ್ತರು ಮತ್ತು ಅದರಲ್ಲಿ ಏನೆಲ್ಲಾ ಹಕ್ಕು ಹಾಗೂ ಕರ್ತವ್ಯಗಳಿವೆ ಎಂಬ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ್, ಪ್ರಾಧ್ಯಾಪಕ ಡಾ.ಎಂ.ನಂಜಯ್ಯ ಹೊಂಗನೂರು ಇನ್ನಿತರರು ಉಪಸ್ಥಿತರಿದ್ದರು.