ಬಿಎಸ್‍ಪಿ ಅಭ್ಯರ್ಥಿಯಿಂದಲೂ ಮಂಡ್ಯ ಡಿಸಿ ವಿರುದ್ಧ ಆಯೋಗಕ್ಕೆ ದೂರು
ಮೈಸೂರು

ಬಿಎಸ್‍ಪಿ ಅಭ್ಯರ್ಥಿಯಿಂದಲೂ ಮಂಡ್ಯ ಡಿಸಿ ವಿರುದ್ಧ ಆಯೋಗಕ್ಕೆ ದೂರು

April 1, 2019

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಯಾದ ನನಗೆ ಕಾನೂನುಬದ್ಧವಾಗಿ ಸಿಗಬೇಕಿದ್ದ ಕ್ರಮಸಂಖ್ಯೆ ವಿಚಾರದಲ್ಲಿ ಮಂಡ್ಯ ಚುನಾವಣಾ ಧಿಕಾರಿಗಳಿಂದಲೇ ಲೋಪವಾಗಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇನೆ ಎಂದು ಬಿಎಸ್‍ಪಿ ಅಭ್ಯರ್ಥಿ ನಂಜುಂಡಸ್ವಾಮಿ ತಿಳಿಸಿದರು.

ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾ ಧಿಕಾರಿಗೆ ದೂರು ನೀಡಲು ಬಂದಿದ್ದ ವೇಳೆ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾದ ನನಗೆ ಮತಯಂತ್ರದಲ್ಲಿ ಕ್ರಮಸಂಖ್ಯೆ 1 ನೀಡಬೇಕಿತ್ತು. ಆದರೆ ಕ್ರಮಸಂಖ್ಯೆ 2 ನೀಡಲಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ ಅಭ್ಯರ್ಥಿಗೆ ಕ್ರಮಸಂಖ್ಯೆ 1 ನೀಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳು ಜೆಡಿಎಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲಾಧಿ ಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯುಕ್ತ ರಿಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದರು.

ನನಗೆ ಆಗಿರುವ ಅನ್ಯಾಯದ ಬಗ್ಗೆ ಚುನಾವಣಾಧಿಕಾರಿಗಳನ್ನು ಕೇಳಿದ್ದಕ್ಕೆ ರಾಷ್ಟ್ರೀಯ ಪಕ್ಷವಾದರೂ ಪ್ರಾದೇಶಿಕ ಪಕ್ಷದ ಜೊತೆ ವಿಲೀನಗೊಳಿಸಿ ನಿಮಗೆ ಕ್ರಮ ಸಂಖ್ಯೆ ಕೊಟ್ಟಿದ್ದೇವೆ ಎಂದು ಹೇಳಿದ್ದರು. ನನ್ನ ಹೆಸರು `ಎನ್‍ಎ’ ಅಕ್ಷರದಿಂದ ಪ್ರಾರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಹೆಸರು `ಎನ್‍ಐ’ ಅಕ್ಷರದಿಂದ ಆರಂಭವಾಗಿದೆ. ವರ್ಣಮಾಲೆ ಪ್ರಕಾರವೇ ಆದರೂ ನನಗೇ 1ನೇ ಕ್ರಮಸಂಖ್ಯೆಯನ್ನು ಕಡ್ಡಾಯವಾಗಿ ಕೊಡಬೇಕಿತ್ತು. ಆದರೆ ಅಧಿಕಾರಿಗಳು ಲೋಪವೆಸಗಿದ್ದರಿಂದ ನನಗೆ ಅನ್ಯಾಯವಾಗಿದೆ. ಹಾಗಾಗಿ ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದೇನೆ ಎಂದು ವಿವರಿಸಿದರು. ಈಗಾಗಲೇ ಸುಮಲತಾ ಅಂಬರೀಶ್ ಅವರ ಚುನಾವಣಾ ಏಜೆಂಟ್ ಕೂಡ ಮಂಡ್ಯ ಜಿಲ್ಲಾಧಿಕಾರಿ ವರ್ಗಾವಣೆಗೆ ಒತ್ತಾಯಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಿಎಸ್‍ಪಿ ಅಭ್ಯರ್ಥಿ ನಂಜುಂಡಸ್ವಾಮಿ ಮಂಡ್ಯ ಡಿಸಿ ಎನ್.ಮಂಜುಶ್ರೀ ಅವರ ವಿರುದ್ಧ ದೂರು ನೀಡಿದ್ದಾರೆ. ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ.

Translate »