ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬುಲೆಟ್ ಬೈಕ್ ವಶ
ಮೈಸೂರು

ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬುಲೆಟ್ ಬೈಕ್ ವಶ

December 9, 2019

ಮೈಸೂರು,ಡಿ.8(ವೈಡಿಎಸ್)- ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ ಬುಲೆಟ್‍ಬೈಕ್ ಅನ್ನು ಎನ್.ಆರ್.ಸಂಚಾರ ಠಾಣಾ ಪೊಲೀಸರು ಭಾನುವಾರ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ.

ಮೈಸೂರು ಕೆ.ಜಿ.ಕೊಪ್ಪಲಿನ ರವಿ ಎಂಬುವರಿಗೆ ಸೇರಿದ ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕುವೆಂಪು ನಗರ ನಿವಾಸಿ ಚಂದ್ರು ಅವರ ಡಿಯೋ ಸ್ಕೂಟರ್ (ಕೆಎ09ಹೆಚ್‍ಜೆ0597) ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ ಮಾಲೀಕರಿಗೆ 39 ನೋಟಿಸ್ ಬಂದಿದ್ದವು. ಈ ಕುರಿತು ಚಂದ್ರು, ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಪರಿಶೀಲಿಸಿದಾಗ, ಬುಲೆಟ್ ಬೈಕ್ ಸವಾರನೊಬ್ಬ ಚಂದ್ರು ಅವರ ಸ್ಕೂಟರ್ ನೋಂದಣಿ ಸಂಖ್ಯೆ ಬಳಸಿರುವುದು ಗೊತ್ತಾಗಿದೆ.

ಅಲ್ಲದೆ, ಬುಲೆಟ್ ಬೈಕ್ ಹೆಚ್ಚಾಗಿ ಪಡುವಾರಹಳ್ಳಿ ಸರ್ಕಲ್ ಬಳಿ ಓಡಾಡಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಚಂದ್ರು, ಜಯಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರ ವಿಭಾಗದ ಎಸಿಪಿ ಸಂದೇಶ್ ಕುಮಾರ್, ಬುಲೆಟ್ ಬೈಕನ್ನು ಪತ್ತೆಹಚ್ಚುವಂತೆ ಎಲ್ಲಾ ಸಂಚಾರ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್.ಆರ್.ಸಂಚಾರ ಠಾಣಾ ಪೊಲೀಸರು ಇರ್ವಿನ್ ರಸ್ತೆಯಲ್ಲಿ ಬುಲೆಟ್ ಬೈಕನ್ನು ತಡೆದು ಆರ್‍ಸಿ ಪುಸ್ತಕ ಪರಿಶೀಲಿಸಿದ್ದಾರೆ. ಈ ವೇಳೆ ಬೈಕ್‍ನ ಸಂಖ್ಯೆ (ಕೆಎ09ಹೆಚ್‍ಜೆ 3597) ಆಗಿದ್ದು, ಡಿಯೋ ಸ್ಕೂಟರ್ ಸಂಖ್ಯೆ ಅಳವಡಿಸಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಬುಲೆಟ್ ಬೈಕ್ ಮಾಲೀಕನ ವಿರುದ್ಧ ಮುಂದಿನ ಕ್ರಮಕೈಗೊಳ್ಳುವಂತೆ ಜಯಲಕ್ಷ್ಮೀ ಪುರಂ ಠಾಣೆಗೆ ಪ್ರಕರಣ ವರ್ಗಾಯಿಸಿದ್ದರು. ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರುವುದಾಗಿ ಆರೋಪಿ ರವಿ ಒಪ್ಪಿಕೊಂಡಿದ್ದಾನೆ.

ಮನವಿ: ವಾಹನಗಳ ನೋಂದಣಿ ಸಂಖ್ಯೆಯನ್ನು ನಕಲು ಮಾಡಿ ಉಪಯೋಗಿಸು ವುದು ಕಾನೂನು ಬಾಹಿರವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧವಾಗಿರುತ್ತದೆ. ಈ ರೀತಿ ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮಕೈ ಗೊಳ್ಳಲಾಗುವುದು. ಈ ಬಗೆಯ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »