ಪಾಠ ಹೇಳುತ್ತಿದ್ದ ಮಕ್ಕಳ ಮನೆಗೇ ಕನ್ನ ಹಾಕಿದ ಮೇಷ್ಟ್ರು…!
ಮೈಸೂರು

ಪಾಠ ಹೇಳುತ್ತಿದ್ದ ಮಕ್ಕಳ ಮನೆಗೇ ಕನ್ನ ಹಾಕಿದ ಮೇಷ್ಟ್ರು…!

November 24, 2018

ಮೈಸೂರು: ಶ್ರೀಮಂತರ ಮಕ್ಕಳಿಗೆ ಮನೆ ಪಾಠ ಹೇಳಿ ಕೊಡುತ್ತಿದ್ದ ಶಿಕ್ಷಕನೇ ಮನೆಯ ಕೀ ಕದ್ದಿಟ್ಟು ಕೊಂಡು ನಂತರ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ನಗದು ಕಳವು ಮಾಡಿದ್ದ ಪ್ರಕರಣವನ್ನು ಕೃತ್ಯ ನಡೆದ ಐದೇ ದಿನದಲ್ಲಿ ಪತ್ತೆ ಹಚ್ಚಿ, ಖದೀಮನನ್ನು ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ರಾಜೀವ್ ನಗರ ಒಂದನೇ ಹಂತ, ಮಾದೇಗೌಡ ಸರ್ಕಲ್ ಸಮೀಪದ ನಿವಾಸಿ, ಗುಂಡ್ಲುಪೇಟೆ ತಾಲೂಕು ಹಂಗಳ ಗ್ರಾಮದ ಹಿರಿಯ ಪ್ರಾಥ ಮಿಕ ಶಾಲೆ ಶಿಕ್ಷಕ ಸೈಯದ್ ತಜಮುಲ್ (31) ಬಂಧಿತ ಖದೀಮನಾಗಿದ್ದು, ಈತನಿಂದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿವರ: ಮೈಸೂರಿನ ಎನ್‍ಐ ಕಾವೇರಿ ಎಂಪೋರಿಯಂ ಮಾಲೀಕ ಇಲಿಯಾಸ್ ಬೇಗ್ ಅವರು ತಮ್ಮ ಪುತ್ರಿಗೆ ನ.18ರಂದು ಮದುವೆ ನಿಶ್ಚಯ ಮಾಡಿದ್ದರು. ಅದಕ್ಕೆ ಮುನ್ನಾ ದಿನ ಅಂದರೆ ನ.17ರಂದು ಖಾಸಗಿ ಹೋಟೆಲ್‍ನಲ್ಲಿ ಸಮಾರಂಭವನ್ನೂ ಇಟ್ಟು ಕೊಂಡಿದ್ದರು. ಈ ವೇಳೆ ಅವರ ಅಂಗಡಿಯಲ್ಲಿ ಸಿಬ್ಬಂದಿ ಪದೇ ಪದೆ ಮನೆಗೆ ಬಂದು ಬೀಗ ತೆರೆದು ಕೆಲ ವಸ್ತುಗಳನ್ನು ಸಮಾರಂಭ ನಡೆಯುತ್ತಿದ್ದ ಖಾಸಗಿ ಹೋಟೆಲ್‍ಗೆ ಕೊಂಡೊಯ್ಯುತ್ತಿದ್ದರು. ಇದೇ ಸಂದರ್ಭ ಬಳಸಿಕೊಂಡ ಸೈಯದ್ ತಜಮುಲ್ ಮನೆಯ ಹತ್ತಿರ ಬರುತ್ತಿದ್ದಂತೆಯೇ ಮುಖಕ್ಕೆ ಬಟ್ಟೆ ಸುತ್ತಿ ಕೊಂಡು ತಾನು ಕದ್ದು ಇಟ್ಟುಕೊಂಡಿದ್ದ ಕೀ ಬಳಸಿ ಮನೆಯೊಳಗೆ ನುಗ್ಗಿ ಕಬೋರ್ಡ್ ನಲ್ಲಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ರೂ. ನಗದು ಕಳವು ಮಾಡಿದ್ದಾನೆ. ಈತ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಸಿ ಕ್ಯಾಮರಾದ ವೈರ್‌ಗನ್ನು ಕಟ್ ಮಾಡಿದ್ದ. ಮಾಲೀಕ ಇಲಿಯಾಸ್ ಬೇಗ್ ಅವರ ಅಂಗಡಿ ಸಿಬ್ಬಂದಿ ಪದೇ ಪದೆ ಮನೆಗೆ ಬಂದು ಕೆಲ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಕಾರಣ ಅಕ್ಕಪಕ್ಕದ ಮನೆಯವರಿಗೂ ಈತನ ಮೇಲೆ ಅನುಮಾನ ಬಂದಿರಲಿಲ್ಲ.

ಸಮಾರಂಭ ಮುಗಿಸಿ ನ.17ರಂದು ರಾತ್ರಿ ಮನೆಗೆ ಬಂದು ಮಲಗಿದ್ದ ಮನೆಯವರಿಗೆ ಸಿಸಿ ಕ್ಯಾಮರಾ ಸಂಪರ್ಕವಿದ್ದ ಟಿವಿ ಕಾರ್ಯ ನಿರ್ವಹಿಸದೇ ಇದ್ದದ್ದು ಗಮನಕ್ಕೆ ಬಂದಿದೆ. ನಂತರ ಗಮನಿಸಿದಾಗ ಅದರ ಸಂಪರ್ಕದ ವೈರ್‌ಗಳನ್ನು ಕತ್ತರಿಸಿ ರುವುದು ಕೂಡ ಕಂಡುಬಂದಿದೆ.

ಅದೇ ವೇಳೆ ಮದುವೆ ಸಮಯದಲ್ಲಿ ವಧು ಧರಿಸಬೇಕಾಗಿದ್ದ ಚಿನ್ನಾಭರಣ ತೆಗೆದು ಕೊಳ್ಳಲು ಕಬೋರ್ಡ್ ತೆರೆದಾಗ ಅಲ್ಲಿಟ್ಟಿದ್ದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಪೈಕಿ 25 ಲಕ್ಷ ರೂ. ಮೌಲ್ಯದ ಚಿನ್ನಾ ಭರಣ ಹಾಗೂ ಒಂದು ಲಕ್ಷ ನಗದು ಕಳವಾಗಿರುವುದು ಕಂಡುಬಂದಿದೆ.

ಮದುವೆ ಕಾರ್ಯ ಮುಗಿದ ನಂತರ ನ.18ರಂದು ಸಂಜೆ ಇಲಿಯಾಸ್ ಬೇಗ್ ಅವರ ಉದಯಗಿರಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಕಳವು ನಡೆದಿದ್ದ ವಿಧಾನ ಗಮ ನಿಸಿದ ಪೊಲೀಸರು, ಮನೆ ಮಾಲೀಕರಿಗೆ ಪರಿಚಯವಿದ್ದವರಿಂದಲೇ ಕೃತ್ಯ ನಡೆದಿದೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳಲ್ಲಿ ಖದೀಮ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಪರಿಣಾಮ ಆತನ ಗುರುತು ಪತ್ತೆಯಾಗಿರಲಿಲ್ಲ. ಆಧು ನಿಕ ತಂತ್ರಜ್ಞಾನದ ಮೂಲಕ ಖದೀಮನ ಪತ್ತೆ ವಿಫಲವಾದಾಗ ಉದಯಗಿರಿ ಇನ್ಸ್ ಪೆಕ್ಟರ್ ಸಂತೋಷ್ ಅವರು ಸಾಂಪ್ರ ದಾಯಿಕ ತನಿಖೆ ಆರಂಭಿಸಿದರು.

ಅಂಗವೈಕಲ್ಯ ನೀಡಿದ ಸುಳಿವು: ತನಿಖೆ ವೇಳೆ ಓರ್ವರು ‘ಸ್ವಲ್ಪ ಕೈ ಸೊಟ್ಟಗಿರುವ ವ್ಯಕ್ತಿ ಮುಖ ಮುಚ್ಚಿಕೊಂಡು ವೇಗವಾಗಿ ಮನೆ ಯಿಂದ ಹೊರ ಬಂದ’ ಎಂದು ನೀಡಿದ ಮಾಹಿತಿ ಆಧರಿಸಿ, ಮದುವೆ ಸಮಾ ರಂಭದ ವಿಡಿಯೋ ವೀಕ್ಷಿಸಿದ ಪೊಲೀಸರಿಗೆ ಕೈ ಸೊಟ್ಟಗಿದ್ದ ಶಿಕ್ಷಕ ಸೈಯದ್ ತಜ ಮುಲ್ ಮೇಲೆ ಅನುಮಾನ ಮೂಡಿದೆ. ಆತನ ಬಗ್ಗೆ ಮನೆಯವರನ್ನು ವಿಚಾರಿಸಿದಾಗ ಆತ ಮಕ್ಕಳಿಗೆ ಪಾಠ ಹೇಳಲು ಮನೆಗೆ ಬರುತ್ತಿದ್ದ. ಮದುವೆಯಲ್ಲೂ ಭಾಗವಹಿಸಿದ್ದ ಎಂಬ ಮಾಹಿತಿ ದೊರೆತಿದೆ. ಸಂಶಯದ ಮೇರೆಗೆ ಸೈಯದ್ ತಜಮುಲ್‍ನನ್ನು ವಶಕ್ಕೆ ಪಡೆದು ವಿಚಾರಿಸಿ ದಾಗ ಈತನೇ ಕಳವು ಮಾಡಿರುವುದು ಪತ್ತೆಯಾಗಿದೆ. ಚಿನ್ನಾಭರಣ ಕಳವು ಮಾಡಿದ ನಂತರ ಸೈಯದ್ ತಜಮುಲ್ ಗುಂಡ್ಲುಪೇಟೆ ಸಿಂಡಿಕೇಟ್ ಬ್ಯಾಂಕ್‍ನಲ್ಲಿ 12,500 ರೂ. ಪಾವತಿಸಿ ಲಾಕರ್ ಪಡೆದು ಅದರಲ್ಲಿ ಚಿನ್ನಾಭರಣ ಇಟ್ಟಿರುವುದು ತನಿಖೆ ವೇಳೆ ತಿಳಿದುಬಂದಿದ್ದು, ಅಲ್ಲಿಗೆ ತೆರಳಿದ ಪೊಲೀಸರು ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾ ಭರಣ ವಶಪಡಿಸಿಕೊಂಡಿದ್ದಾರೆ.

ನಗರ ಅಪರಾಧ ವಿಭಾಗದ ಡಿಸಿಪಿ ವಿಕ್ರಂ ವಿ. ಆಮಟೆ ಮಾರ್ಗದರ್ಶನದಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಉದಯ ಗಿರಿ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪಿ.ಪಿ. ಸಂತೋಷ್, ಸಬ್ ಇನ್ಸ್‍ಪೆಕ್ಟರ್ ಎಂ.ಜೈಕೀರ್ತಿ, ಎಎಸ್‍ಐ ಗಳಾದ ಬಾಬು ಲೋಕನಾಥ್, ಕೆ.ಸಿ.ಬೀರಪ್ಪ, ಸಿಬ್ಬಂದಿಗಳಾದ ಬಾಬು, ಎಂ.ಶಂಕರ್, ರತನ್‍ಕುಮಾರ್, ದಿವಾಕರ್, ರವಿಕುಮಾರ್, ಕುಮಾರ್, ಕೃಷ್ಣ, ಆರ್.ಎಸ್.ಮಂಜು ನಾಥ್, ಎಂ.ಎಂ.ಸಿದ್ದಿಕ್ ಅಹಮದ್, ಮೋಹನ್‍ಕುಮಾರ್, ಪ್ರಸನ್ನಮೂರ್ತಿ, ತಿಮ್ಮಪ್ಪ, ಪ್ರಶಾಂತ್ ನಾಯಕ್, ಪಲ್ಲವಿ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »