ವೈದ್ಯರ ಮನೆಯಲ್ಲಿ ಭಾರೀ ಕಳವು : ಪ್ರಕರಣಪರಿಚಯಸ್ಥರಿಂದಲೇ ಕೃತ್ಯ ಶಂಕೆ, ಪೊಲೀಸರ ತೀವ್ರ ಶೋಧ
ಮೈಸೂರು

ವೈದ್ಯರ ಮನೆಯಲ್ಲಿ ಭಾರೀ ಕಳವು : ಪ್ರಕರಣಪರಿಚಯಸ್ಥರಿಂದಲೇ ಕೃತ್ಯ ಶಂಕೆ, ಪೊಲೀಸರ ತೀವ್ರ ಶೋಧ

April 15, 2019

ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಡಾ.ರಾಜೀವ್ ಅವರ ಮನೆಯಲ್ಲಿ ನಡೆದಿರುವ ಭಾರೀ ಪ್ರಮಾಣದ ನಗ-ನಾಣ್ಯ ಕಳವು ಪ್ರಕರಣ ಭೇದಿಸಲು ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.

ಏಪ್ರಿಲ್ 10ರಂದು ಬೆಳಿಗ್ಗೆ ಬೆಳಕಿಗೆ ಬಂದ ಕಳವು ಪ್ರಕರಣದಲ್ಲಿ ಮಹಜರು ನಡೆಸಿದಾಗ ಕಂಡು ಬಂದ ಸಾಂದರ್ಭಿಕ ಸಾಕ್ಷ್ಯಗಳಿಂದ ವೈದ್ಯರ ಮನೆಯಲ್ಲಿ ಕೆಲಸ ಮಾಡುವವರು, ಅವರಿಗೆ ಗೊತ್ತಿರುವವರು, ಸಂಬಂಧಿಕರಲ್ಲದೆ ಅಪರಿಚಿತರಿಂದ ಈ ಕೃತ್ಯ ನಡೆದಿರಲು ಸಾಧ್ಯವಿಲ್ಲ ಎಂಬುದು ದೃಢಪಟ್ಟಿದೆ.

ಮನೆ ಕೆಲಸಗಾರರು, ಮನೆಗೆ ಆಗಿಂದಾಗ್ಗೆ ಬಂದು ಹೋಗುತ್ತಿದ್ದವರು, ಸಂಪರ್ಕ ದಲ್ಲಿದ್ದವರನ್ನು ಕರೆತಂದು ತೀವ್ರ ವಿಚಾರಣೆ ನಡೆಸುತ್ತಿರುವ ವಿಜಯನಗರ ಠಾಣೆ ಪೊಲೀಸರು, ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಮೊಬೈಲ್ ಫೋನ್ ಕಾಲ್ ಡೀಟೇಲ್ ಸಂಗ್ರಹಿಸಲಾಗಿದ್ದು, ಡಾ. ರಾಜೀವ್ ಮತ್ತು ಮನೆಯವರೊಂದಿಗೆ ಮೊಬೈಲ್ ಮೂಲಕ ಸಂಪರ್ಕ ದಲ್ಲಿದ್ದವರಿಗೆ ಮಾಹಿತಿ ಆಧಾರದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮನೆಯ ಕಬ್ಬಿಣದ ಬಾಗಿಲು ಮುರಿದು ಆ ಮೂಲಕ ಹಿಂಬದಿ ಬಾಗಿಲು ಮೀಟಿ ಒಳಗೆ ನುಸುಳಿ, ಮೊದಲ ಮಹಡಿಯ ಮಾಸ್ಟರ್ ಬೆಡ್ ರೂಂನ ಮಂಚದಡಿ ಗಾದ್ರೆಜ್ ಲಾಕರ್‍ನಲ್ಲಿರಿಸಲಾಗಿದ್ದ 5 ಕೆಜಿ ಚಿನ್ನ ಹಾಗೂ ಬೆಲೆ ಬಾಳುವ 30 ಇಂಪೋರ್ಟೆಡ್ ವಾಚ್‍ಗಳು ಹಾಗೂ ಅದೇ ಮಹಡಿಯ ಮತ್ತೊಂದು ಮಾಸ್ಟರ್ ಬೆಡ್ ರೂಂನ ಕಬೋರ್ಡ್ ಡ್ರಾಯರ್‍ನಲ್ಲಿರಿಸಿದ್ದರೆನ್ನಲಾದ 11 ಲಕ್ಷ ರೂ. ನಗ ದನ್ನು ಎಗರಿಸಿರುವುದು ಪರಿಚಯಸ್ಥರಿಂದಲೇ ಎಂಬುದು ಮಹಜರು ವೇಳೆ ಪೊಲೀಸರಿಗೆ ದೃಢಪಟ್ಟಿದೆ. ಮಂಚದಡಿ ಇರುವ ಲಾಕರ್ ಹೊಡೆದಿರುವುದರಿಂದ ಗೊತ್ತಿರುವವರು ಮಾತ್ರ ಆಭರಣ, ವಾಚ್ ಹಾಗೂ ಕ್ಯಾಷ್ ದೋಚಿರಬಹುದೆಂಬ ತೀರ್ಮಾನಕ್ಕೆ ಬಂದಿರುವ ತನಿಖಾಧಿಕಾರಿಗಳು, ಆ ನಿಟ್ಟಿನಲ್ಲಿ ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ. ಮತ್ತೊಂದೆಡೆ ಎಸಿಪಿ ಬಿ.ಆರ್.ಲಿಂಗಪ್ಪರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‍ಗಳಾದ ಸಿ. ಕಿರಣ್‍ಕುಮಾರ್ ಹಾಗೂ ರಾಜು ಸಹ ವೈದ್ಯರ ಮನೆಯ ಕಳವು ಪ್ರಕರಣ ಭೇದಿಸಲು ತನಿಖೆ ತೀವ್ರಗೊಳಿಸಿದ್ದಾರೆ.

Translate »