ಬಸ್‍ಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ
ಮೈಸೂರು

ಬಸ್‍ಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ

December 1, 2018

ಮೈಸೂರು:  ಲಾರಿಯೊಂದು ಸಾರಿಗೆ ಸಂಸ್ಥೆ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಬಸ್‍ನಲ್ಲಿದ್ದ ಲಕ್ಷ್ಮೀ, ಸಿದ್ದರಾಜಮ್ಮ, ಶಿವಸ್ವಾಮಿ, ನೂರ್ ಅಸ್ಮಾ, ಮಂಗಳ, ಸುಧಾ, ಅಕ್ಷತಾ, ಶ್ರೀನಿವಾಸ್ ಹಾಗೂ ಮಹದೇವ ಅವರಿಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಮೈಸೂರಿನಿಂದ ಮಳವಳ್ಳಿಗೆ ಸಂಚರಿಸುತ್ತಿದ್ದ ಪಾಂಡವ ಪುರ ಡಿಪೋಗೆ ಸೇರಿದ ಬಸ್(ಕೆಎ-11, ಎಫ್-0170) ರಿಂಗ್ ರಸ್ತೆ ದೇವೇ ಗೌಡ ವೃತ್ತದ ಬಳಿ ಹೋಗುತ್ತಿದ್ದಾಗ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಕಡೆ ಯಿಂದ ರಿಂಗ್‍ರಸ್ತೆಯಲ್ಲಿ ವೇಗವಾಗಿ ಬಂದ ಲಾರಿ(ಟಿಎಸ್-34, ಟಿ-3512) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್‍ನ ಹಿಂಭಾಗ ಹಾಗೂ ಲಾರಿಯ ಮುಂಭಾಗ ಜಖಂ ಆಗಿದೆ. ಬಸ್‍ನಲ್ಲಿ ಸುಮಾರು 47 ಮಂದಿ ಪ್ರಯಾಣಿಕರಿದ್ದರಾದರೂ ಹಿಂಭಾಗದಲ್ಲಿದ್ದ 9 ಮಂದಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವ ಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಈ ಸಂಬಂಧ ಬಸ್ ಚಾಲಕ ನೀಡಿದ ದೂರಿನನ್ವಯ, ಅಜಾಗರೂಕತೆಯಿಂದ ಚಾಲನೆ ಮಾಡಿ, ಅಪಘಾತ ನಡೆಸಿದ ಲಾರಿ ಚಾಲಕನ ವಿರುದ್ಧ ಸಿದ್ದಾರ್ಥ ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »