ನಿರಾಶ್ರಿತರ ತಾಣವಾಗಿರುವ ಬಸ್ ತಂಗುದಾಣಗಳು
ಮೈಸೂರು

ನಿರಾಶ್ರಿತರ ತಾಣವಾಗಿರುವ ಬಸ್ ತಂಗುದಾಣಗಳು

August 8, 2019

ಮೈಸೂರು,ಆ.7(ಆರ್‍ಕೆ)-ಬಸ್ಸಿಗಾಗಿ ಕಾಯುವ ಪ್ರಯಾ ಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗು ದಾಣಗಳೀಗ ನಿರಾಶ್ರಿತರ ತಾಣವಾಗಿ ಪರಿವರ್ತನೆಯಾಗು ತ್ತಿವೆ. ಬಸ್ಸುಗಳಿಗೆ ಕಾಯುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ತಮ್ಮ ಲಗ್ಗೇಜುಗಳ ನ್ನಿಟ್ಟುಕೊಂಡು ಕುಳಿತುಕೊಳ್ಳಲೆಂದು ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ತಂಗುದಾಣಗಳನ್ನು ನಿರ್ಮಿಸಲಾ ಗಿದೆ. ಆದರೆ, ಅಲ್ಲಿ ಆಸ್ಪತ್ರೆಗೆ ಬರುವ ನಿತ್ರಾಣ ರೋಗಿಗಳು, ವೃದ್ಧರು, ಅಪರಿಚಿತರು, ಕೂಲಿ ಕಾರ್ಮಿಕರು ಕುಳಿತು ಕಾಲ ಕಳೆಯುತ್ತಿದ್ದಾರಲ್ಲದೆ, ನಿರಾಶ್ರಿತರು ಮಲಗಿ ನಿದ್ರಿಸಲು ಆಶ್ರಯ ತಾಣವಾಗಿಸಿಕೊಂಡಿದ್ದಾರೆ. ಅವರು ಆವರಿಸಿಕೊಂಡಿರು ವುದರಿಂದ ಪ್ರಯಾಣಿಕರು ತಂಗುದಾಣದ ಬಳಿ ಹೋಗಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಸಾರಿಗೆ ಬಸ್ಸುಗಳೂ ಬಸ್ ತಂಗುದಾಣದ ಮುಂದೆ ನಿಲುಗಡೆ ಕೊಡದೆ ತುಸು ದೂರ ಹಿಂದೆ ಅಥವಾ ಮುಂದೆ ಹೋಗಿ ನಿಲ್ಲುತ್ತಿವೆ.

ಮೈಸೂರಿನ ಕೆ.ಆರ್.ಆಸ್ಪತ್ರೆ ಎದುರು ಇರ್ವಿನ್ ರಸ್ತೆ ಯಲ್ಲಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಎದುರು ಬಂಬೂ ಬಜಾರ್ ರಸ್ತೆ, ಹಳೇ ಆರ್‍ಎಂಸಿ ಸರ್ಕಲ್, ಹೆಚ್.ಸಿ. ದಾಸಪ್ಪ ಸರ್ಕಲ್ ಬಳಿ ಮಾಂಡೋವಿ ಮೋಟಾರ್ಸ್ ಎದುರು, ಮಹಾರಾಣಿ ಕಾಲೇಜು ಹಾಸ್ಟೆಲ್ ಎದುರು ಜೆಎಲ್‍ಬಿ ರಸ್ತೆ, ಪಡುವಾರಹಳ್ಳಿಯ ಶ್ರೀ ಮಹದೇಶ್ವರ ದೇವ ಸ್ಥಾನದ ಎದುರು, ಜಯಲಕ್ಷ್ಮೀಪುರಂನ ಶ್ರೀ ರಾಘ ವೇಂದ್ರಸ್ವಾಮಿ ದೇವಸ್ಥಾನದ ಬಳಿ ಸೇರಿದಂತೆ ಮೈಸೂ ರಿನ ಹಲವು ಕಡೆಯ ಬಸ್ ತಂಗುದಾಣಗಳು ಪ್ರಯಾ ಣಿಕರ ರಕ್ಷಣೆಗೆ ಲಭ್ಯವಾಗುತ್ತಿಲ್ಲ. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಬಸ್ ತಂಗುದಾಣಗಳನ್ನು ನಿರ್ಮಿಸ ಲಾಗಿದೆಯಾದರೂ ಉಪಯೋಗಕ್ಕೆ ಬಾರದ ಕಾರಣ ಸಾರ್ವಜನಿಕರ ತೆರಿಗೆ ಹಣ ವ್ಯಯವಾಗುತ್ತಿದೆ.

Translate »