ವ್ಯಾಪಾರ ವೈಷಮ್ಯ: ಸೋದರ ಸಂಬಂಧಿ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಅಂಗಡಿ ಮಾಲೀಕ
ಮೈಸೂರು

ವ್ಯಾಪಾರ ವೈಷಮ್ಯ: ಸೋದರ ಸಂಬಂಧಿ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಅಂಗಡಿ ಮಾಲೀಕ

March 13, 2020

ಚಾಮರಾಜನಗರ, ಮಾ.12-ವ್ಯಾಪಾರ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಒಂದು ಅಂಗಡಿಯ ಮಾಲೀಕನ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿದ ಘಟನೆ ಚಾಮರಾಜ ನಗರದ ವಾಣಿ ಯಾರ್ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ವರದಿಯಾಗಿದೆ.

ನಗರದ ಕೆ.ಪಿ.ಮೊಹಲ್ಲಾ ನಿವಾಸಿ ರಾಜೀಕ್ ಅಹಮದ್ (26) ಗುಂಡೇಟಿನಿಂದ ಗಾಯಗೊಂಡವರಾಗಿದ್ದು, ಮೈಸೂ ರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮತ್ತು ವಾಣಿಯಾರ್ ರಸ್ತೆ ನಿವಾಸಿ ಫಾರೂಕ್ ಅಕ್ಕಪಕ್ಕದಲ್ಲೇ ಸ್ಟೀಲ್ ಅಂಗಡಿ ನಡೆಸುತ್ತಿದ್ದಾರೆ. ಸೋದರ ಸಂಬಂಧಿಗಳಾದ ಇವರಿಬ್ಬರ ನಡುವೆ ವ್ಯಾಪಾರ ವಿಚಾರದಲ್ಲಿ ವೈಷಮ್ಯವಿತ್ತು ಎಂದು ಹೇಳಲಾಗಿದೆ.

ಬುಧವಾರ ಮಧ್ಯರಾತ್ರಿ ಫಾರೂಕ್ ಮತ್ತು ಆತನ ಸ್ನೇಹಿತರಾದ ತಬಶೀರ್, ಶಹಜಾನ್ ಅವರುಗಳು ತಮ್ಮ ಮನೆ ಬಳಿ ಬಂದು ಗಲಾಟೆ ಮಾಡಿದರು. ಈ ವೇಳೆ ತಬಶೀರ್ ಮತ್ತು ಶಹಜಾನ್ ತನ್ನ ಮೇಲೆ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಫಾರೂಕ್ ಪಿಸ್ತೂಲ್‍ನಿಂದ ತನ್ನ ಎಡ ತೊಡೆಗೆ ಗುಂಡು ಹಾರಿಸಿದ್ದಾನೆ ಎಂದು ರಾಜೀಕ್ ಅಹಮದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆಯ ಇನ್ಸ್‍ಪೆಕ್ಟರ್ ಎಂ.ಸಿ.ನಾಗೇಗೌಡ, ಆರೋಪಕ್ಕೊಳಗಾಗಿರುವ ಫಾರೂಕ್ ಬಳಿ ಪರವಾನಗಿ ಪಡೆದ ಪಿಸ್ತೂಲ್ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ಸಂಬಂಧ `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಡಿವೈಎಸ್‍ಪಿ ಜೆ.ಮೋಹನ್, ಹಲ್ಲೆಗೊಳಗಾಗಿರುವ ರಾಜೀಕ್ ಅಹಮದ್ ತೊಡೆಗೆ ಆಗಿರುವ ಗಾಯವು ಗುಂಡೇಟಿ ನಿಂದ ಆದಂತೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಸ್ಕ್ರೂ ಡ್ರೈವರ್‍ನಿಂದ ಚುಚ್ಚಿದ ಗಾಯ ಅದು ಇರಬಹುದು ಎಂದೆನಿಸುತ್ತದೆ. ಆದರೆ ತನ್ನ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಲಾಗಿದೆ ಎಂದು ರಾಜೀಕ್ ನೀಡಿರುವ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ಪಿಸ್ತೂಲ್ ವಶಪಡಿಸಿಕೊಂಡು ವಿಧಿ-ವಿಜ್ಞಾನ ಪ್ರಯೋ ಗಾಲಯಕ್ಕೆ ಕಳುಹಿಸಿದಾಗ ಆ ಪಿಸ್ತೂಲ್‍ನಿಂದ ಗುಂಡು ಹಾರಿದೆಯೇ ಎಂಬುದು ದೃಢಪಡಲಿದೆ. ಅಲ್ಲದೇ ವೈದ್ಯಕೀಯ ವರದಿಯಿಂದಲೂ ರಾಜೀಕ್ ತೊಡೆಗೆ ಗಾಯ ವಾಗಿರುವುದು ಯಾವುದರಿಂದ ಎಂಬುದು ಗೊತ್ತಾಗಲಿದೆ ಎಂದರು.

Translate »