ಉಪಚುನಾವಣೆ: ಮಂಡ್ಯ ನಗರಸಭೆ `ಕೈ’ ತೆಕ್ಕೆಗೆ
ಮಂಡ್ಯ

ಉಪಚುನಾವಣೆ: ಮಂಡ್ಯ ನಗರಸಭೆ `ಕೈ’ ತೆಕ್ಕೆಗೆ

July 10, 2018

ನೂತನ ಅಧ್ಯಕ್ಷೆಯಾಗಿ ಷಹಜಹಾನ್ ಆಯ್ಕೆ, ಕಾಂಗ್ರೆಸ್‍ಗೆ ಜಯ: ಜೆಡಿಎಸ್‍ಗೆ ಭಾರೀ ಮುಖಭಂಗ

ಮಂಡ್ಯ:  ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ 26ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಷಹಜಹಾನ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಹೊಸಹಳ್ಳಿ ಬೋರೇಗೌಡರ ನಿಧನದಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಉಪಚುನಾವಣೆ ನಿಗದಿಯಾಗಿತ್ತು. ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಗರದ 26ನೇ ವಾರ್ಡ್‍ನ ಸದಸ್ಯೆ, ಮೂಡಾ ಅಧ್ಯಕ್ಷ ಮುನಾವರ್ ಖಾನ್ ಪತ್ನಿ ಷಹಜಹಾನ್ ಪ್ರತಿಸ್ಪರ್ಧಿ 1ನೇ ವಾರ್ಡ್‍ನ ಜೆಡಿಎಸ್ ಸದಸ್ಯೆ ಸುನೀತಾ ಅವರನ್ನು 30 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.

ಇಂದು ನಡೆದ ಚುನಾವಣಾ ಪ್ರಕ್ರಿಯೆ ಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ 6 ಮಂದಿ ಆಕಾಂಕ್ಷಿತರಿಂದ 9 ನಾಮಪತ್ರ ಸಲ್ಲಿಕೆಯಾಗಿದ್ದವು. ಅನಿಲ್‍ಕುಮಾರ್ 3, ಷಹಜಹಾನ್ 3, ಸುನೀತಾ 3, ಚಿಕ್ಕಣ್ಣ 1, ಬೋರೇಗೌಡ 1, ಮಹೇಶ್ 1 ನಾಮ ಪತ್ರಗಳನ್ನು ಸಲ್ಲಿಸಿದ್ದರು. ಅಂತಿಮವಾಗಿ ಕಣದಲ್ಲಿ ಕಾಂಗ್ರೆಸ್ ಸದಸ್ಯೆ ಷಹಜಹಾನ್ ಹಾಗೂ ಜೆಡಿಎಸ್ ಸದಸ್ಯೆ ಸುನೀತಾ ಉಳಿದರು. ಇನ್ನುಳಿದವರು ನಾಮಪತ್ರ ವಾಪಸ್ ಪಡೆದರು.

ನಂತರ ನಡೆದ ಸದಸ್ಯರಿಂದ ಕೈ ಎತ್ತುವ ಚುನಾವಣಾ ಪ್ರಕ್ರಿಯೆಯಲ್ಲಿ ಷಹಜಹಾನ್ ಪರ 30 ಮತಗಳು, ಸುನೀತಾ ಪರ 3 ಮತಗಳು ಚಲಾವಣೆಗೊಂಡವು. ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ರಾಜೇಶ್ ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಷಹಜಹಾನ್ ಅವರ ಆಯ್ಕೆಯನ್ನು ಘೋಷಿಸಿದರು. ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಹಾಗೂ ಕಾರ್ಯ ಕರ್ತರು ಪಟಾಕಿ ಸಿಡಿಸಿ ಅಭಿನಂದನೆ ಸಲ್ಲಿಸಿದರು.

ಒಟ್ಟು 35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಜೆಡಿಎಸ್ 10, ಕಾಂಗ್ರೆಸ್ 15, ಬಿಜೆಪಿ 1 ಹಾಗೂ ಪಕ್ಷೇತರರು 9 ಮಂದಿ ಪೈಕಿ 17ನೇ ವಾರ್ಡ್‍ನ ಹೊಸ ಹಳ್ಳಿ ಬೋರೇಗೌಡ ನಿಧನ ಹೊಂದಿದ್ದ ರಿಂದ ಸದಸ್ಯರ ಸಂಖ್ಯೆ 34ಕ್ಕೆ ಇಳಿದಿತ್ತು. ಇಂದು 34ನೇ ವಾರ್ಡ್‍ನ ಪುಟ್ಟ ತಾಯಮ್ಮ ಅವರು ಅನಾರೋಗ್ಯದಿಂದ ಗೈರು ಹಾಜರಾಗಿದ್ದರಿಂದ 33 ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದರು.

ಶಾಸಕ ಎಂ.ಶ್ರೀನಿವಾಸ್ ಗೈರು: ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನಕ್ಕೆ ಶಾಸಕ ಹಾಗೂ ಸಂಸದರಿಗೆ ಅವಕಾಶವಿದೆ. ಸಂಸದರ ಸ್ಥಾನ ಖಾಲಿ ಉಳಿದಿದ್ದು, ಶಾಸಕ ಎಂ.ಶ್ರೀನಿವಾಸ್ ಈ ಮೊದಲೆ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಬಾಹ್ಯ ಒಪ್ಪಂದ ಮಾಡಿಕೊಂಡಿದ್ದರಿಂದ ಇತ್ತ ಕಡೆ ಸುಳಿಯಲಿಲ್ಲ ಎನ್ನುವ ಮಾತು ಗಳು ಕೇಳಿ ಬಂದವು. ಹಾಗಾಗಿ ನಗರ ಸಭೆಯ 33 ಮತಗಳಷ್ಟೆ ಚಲಾವಣೆಯಾಗಿದ್ದು, ಈ ಪೈಕಿ 30 ಮತಗಳು ಕಾಂಗ್ರೆಸ್‍ನ ಷಹಜಹಾನ್ ಪರ ಚಲಾವಣೆಗೊಂಡವು. ಇದರೊಂದಿಗೆ ಉಳಿದ ಎರಡು ತಿಂಗಳ ಅವಧಿಗೆ ಅಧ್ಯಕ್ಷ ಗದ್ದುಗೆ ಏರಿದರು.

ಬಿಗಿ ಪೊಲೀಸ್ ಬಂದೋಬಸ್ತ್: ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ಸುತ್ತ ಪೊಲೀಸ್ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಾಟಕೀಯ ಬೆಳವಣಿಗೆ: ನಗರಸಭೆ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಕಡೇ ಘಳಿಗೆಯಲ್ಲಿ ನಗರದ ಪ್ರವಾಸಿ ಮಂದಿರ ದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಅನಿಲ್ ಕುಮಾರ್ ಹಾಗೂ ಮಹೇಶ್ ಅವರು ನಾವು ಅಧ್ಯಕ್ಷ ಆಕಾಂಕ್ಷಿ ಯಾಗಿದ್ದೇವೆ. ನಾಮಪತ್ರ ವಾಪಸ್ ಪಡೆಯುವ ಮಾತೆ ಇಲ್ಲ ಎಂದು ಪಟ್ಟು ಹಿಡಿದು ಕುಳಿತರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಹಾಗೂ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ವರಿಷ್ಠರ ಸೂಚನೆಯಂತೆ ಷಹಜಹಾನ್‍ಗೆ ಅವಕಾಶ ಮಾಡಿ ಕೊಡುವಂತೆ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಮಹೇಶ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.

ನಗರಸಭೆ ಉಪಾಧ್ಯಕ್ಷೆ ಸುಜಾತಮಣ , ಆಯುಕ್ತ ಟಿ.ಎನ್.ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡ ಪಿ.ರವಿಕುಮಾರ್ ಗೌಡ ಗಣಿಗ, ಮೂಡಾ ಅಧ್ಯಕ್ಷ ಮುನಾವರ್ ಖಾನ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ, ಕಾಂಗ್ರೆಸ್ ಸದಸ್ಯರಾದ ಅನಿಲ್‍ಕುಮಾರ್, ಮಹೇಶ್ ಸೇರಿದಂತೆ ಇನ್ನಿತರರ ಸದಸ್ಯರು ಭಾಗವಹಿಸಿದ್ದರು.

Translate »