`ದೇವರಾಜ ಅರಸು’ ಜಿಲ್ಲೆ ರಚನೆ ಬೇಡಿಕೆ
ಮೈಸೂರು

`ದೇವರಾಜ ಅರಸು’ ಜಿಲ್ಲೆ ರಚನೆ ಬೇಡಿಕೆ

October 15, 2019

ಬೆಂಗಳೂರು, ಅ.14(ಕೆಎಂಶಿ)- ಮೈಸೂರು ಜಿಲ್ಲಾ ವಿಭಜನೆಗೆ ಮತ್ತೆ ಚಾಲನೆ ದೊರೆತಿದೆ. ಕೊಡಗು, ಮೈಸೂರಿನ ಹೆಬ್ಬಾಗಿಲಾಗಿರುವ ಹುಣಸೂರು ನಗರವನ್ನು ದೇವರಾಜ ಅರಸು ಹೆಸರಿನಲ್ಲಿ ಹೊಸ ಜಿಲ್ಲೆ ಸ್ಥಾಪಿಸಬೇಕು ಎಂಬ ಕೂಗಿಗೆ ರಾಜ್ಯ ಸರ್ಕಾರವೂ ತಲೆಬಾಗಿದಂತಿದೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ್, ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ನೂತನ ಜಿಲ್ಲಾ ಸ್ಥಾಪನೆಗೆ ಆಗ್ರಹಿಸಿದ್ದಲ್ಲದೆ, ಇದರಿಂದಾಗುವ ಅನುಕೂಲಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ. ವಿಶ್ವನಾಥ್ ಅವರ ಮನವಿಗೆ ಮೊದಲು ಹೇಗೆ ಆಗುತ್ತೆ ಎಂದ ಮುಖ್ಯಮಂತ್ರಿಯವರು, ಈಗಾಗಲೇ ನಿಮ್ಮ ಸ್ನೇಹಿತರೇ (ಅನರ್ಹರು) ಬಳ್ಳಾರಿ ಹಾಗೂ ಬೆಳಗಾವಿ ವಿಭಜನೆ ಕೇಳಿದ್ದಾರೆ. ಇದೇ ಇನ್ನೂ ಇತ್ಯರ್ಥವಾಗಿಲ್ಲ. ಅಪಸ್ವರಗಳು ಕೇಳಿ ಬಂದಿವೆ ಎಂದಾಗ ಪಟ್ಟು ಬಿಡದ ವಿಶ್ವನಾಥ್ ದೇವರಾಜ ಅರಸು ಸಾಮಾಜಿಕ ಸುಧಾರಣೆ ಹರಿಕಾರ. ಅವರ ಹೆಸರಿನಲ್ಲಿ ಜಿಲ್ಲೆ ಸ್ಥಾಪಿಸುವುದರಿಂದ ನಿಮಗೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಗ್ರಾಮೀಣ ಜನತೆಗೆ ಆಡಳಿತ ಕೈಗೆಟಕಲು ಮೈಸೂರು ಜಿಲ್ಲೆ ವಿಭಜನೆ ಅಗತ್ಯವಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರ ಸ್ವಾಮಿ ಇದೇ ಜಿಲ್ಲೆಗೆ 2 ಹೊಸ ತಾಲೂಕುಗಳನ್ನು ಪ್ರಕಟಿಸಿದ್ದರು. ಇದರಿಂದ ಜನತೆಗೆ ಬಹಳಷ್ಟು ಅನುಕೂಲವಾಗಿದೆ. ಹೊಸ ತಾಲೂಕಿಗೆ ಯಾರ ವಿರೋಧವೂ ಬರಲಿಲ್ಲ. ಮೈಸೂರು ಮತ್ತು ಕೊಡಗಿಗೆ ಹೆಬ್ಬಾಗಿಲಾಗಿರುವ ಹುಣಸೂರು ವಾಣಿಜ್ಯ ಚಟುವಟಿಕೆಗಳಲ್ಲಿ ಮುಂದಿದೆ. ಹೊಸ ಜಿಲ್ಲೆಯಾಗಿ ಮಾರ್ಪಟ್ಟರೆ, ಆರ್ಥಿಕ ವಾಗಿಯೂ ಮತ್ತಷ್ಟು ಸದೃಢಗೊಳ್ಳಲು ಸಹ ಕಾರಿಯಾಗುತ್ತದೆ. ಉದ್ದೇಶಿತ ಜಿಲ್ಲಾ ವ್ಯಾಪ್ತಿ ಅರಣ್ಯ ಹಾಗೂ ನದಿಗಳ ದಡದಲ್ಲಿದೆ. ವಿಶ್ವಕ್ಕೆ ಗುಣ ಮಟ್ಟದ ತಂಬಾಕು ಇಲ್ಲಿಂದಲೇ ಸರಬರಾಜು ಆಗುವುದು. ಅಷ್ಟೇ ಅಲ್ಲ ಶುಂಠಿ, ಹತ್ತಿ, ಅಲ್ಲದೆ ಎಂದಿನಂತೆ ಕಬ್ಬು ಮತ್ತು ಇತರ ಕೃಷಿ ಚಟುವಟಿಕೆಗಳ ಕೇಂದ್ರ ಬಿಂದು. ಅರಣ್ಯದ ಉಪಕಸುಬಿನಲ್ಲೂ ಹುಣಸೂರು ನಗರ ಪ್ರಥಮ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಹುಣಸೂರನ್ನು ಜಿಲ್ಲಾ ಕೇಂದ್ರವ ನ್ನಾಗಿಸಿ ಅದಕ್ಕೆ ಹುಣಸೂರು ತಾಲೂಕು, ಕೆ.ಆರ್.ನಗರ, ಹೆಚ್.ಡಿ. ಕೋಟೆ, ಸರಗೂರು, ಸಾಲಿಗ್ರಾಮ, ಪಿರಿಯಾಪಟ್ಟಣ ತಾಲೂಕುಗಳನ್ನು ಸೇರ್ಪಡೆ ಮಾಡಿ. ಇದರಿಂದ ಮೈಸೂರು ಕೇಂದ್ರಕ್ಕೂ ಯಾವುದೇ ಹಾನಿಯಾಗುವುದಿಲ್ಲ. ಆಡಳಿತ ದೃಷ್ಟಿಯಿಂದ ಹೆಚ್ಚು ಜಿಲ್ಲೆ ಮತ್ತು ತಾಲೂಕು ರಚನೆಯಾದರೆ, ಜನತೆಗೆ ಆಡಳಿತ ಕೈಗೆಟಕಿದಂತಾಗುತ್ತದೆ ಎಂದು ವಿವರಿಸಿದ್ದಾರೆ.

ವಿವರಣೆ ಪಡೆದ ಮುಖ್ಯಮಂತ್ರಿಯವರು ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿಸುತ್ತೇನೆ. ನೀವು ಅಧಿಕೃತ ಮನವಿ ಸಲ್ಲಿಸಿ. ನಮ್ಮ ಉದ್ದೇಶವು ಜನರಿಗೆ ಆಡಳಿತ ಆದಷ್ಟು ಹತ್ತಿರವಿರಬೇಕೆನ್ನುವುದೇ ಆಗಿದೆ ಎನ್ನುವುದರ ಮೂಲಕ ವಿಶ್ವನಾಥ್ ಬೇಡಿಕೆಗೆ ಪುಷ್ಟಿ ನೀಡಿ ದ್ದಾರೆ. ನೀವು ಸ್ಥಳೀಯ ಜನಪ್ರತಿನಿಧಿಗಳ ಜತೆ ಮಾತುಕತೆ ನಡೆಸಿ ಒಮ್ಮತಕ್ಕೆ ಬನ್ನಿ, ನಂತರ ನಿಯೋಗದೊಂದಿಗೆ ಬಂದು ಪ್ರಸ್ತಾವನೆ ಸಲ್ಲಿಸಿ ಎಂದು ಮುಖ್ಯಮಂತ್ರಿ ಅವರು ವಿಶ್ವನಾಥ್ ಅವರಿಗೆ ಸೂಚಿಸಿ ದ್ದಾರೆ. ಹೊಸ ಜಿಲ್ಲೆಯ ರಚನೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಗಳು ಏಳುವುದು ಸಹಜ. ಹೀಗಾಗಿ ಪರಸ್ಪರ ಮಾತುಕತೆಯ ಮೂಲಕ ಒಳ್ಳೆಯ ಕೆಲಸ ಮಾಡೋಣ ಎಂದಿದ್ದಾರೆ. ಆಂಧ್ರ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಜಿಲ್ಲೆಗಳಿಗೆ ಹೆಸರು ಇಡಲಾಗಿದೆ. ಕರ್ನಾಟಕದಲ್ಲೂ ಅಂತಹ ಪರಂಪರೆ ಆರಂಭಿಸುವುದು ಸಾಮಾಜಿಕ ಕ್ರಾಂತಿಯ ಹರಿಕಾರರಾದ ದೇವರಾಜ ಅರಸು ಅವರಿಗೆ ನಾವು ಸಲ್ಲಿ ಸುವ ಗೌರವ ಎಂದು ಎ.ಹೆಚ್.ವಿಶ್ವನಾಥ್ ವಿವರಿಸಿದ್ದಾರೆ.

Translate »