ಬಾಲೆಯರಿಗೆ ಲೈಂಗಿಕ ಹಿಂಸೆ: ಇಬ್ಬರಿಗೆ ಜೈಲು ಶಿಕ್ಷೆ, ದಂಡ
ಮೈಸೂರು

ಬಾಲೆಯರಿಗೆ ಲೈಂಗಿಕ ಹಿಂಸೆ: ಇಬ್ಬರಿಗೆ ಜೈಲು ಶಿಕ್ಷೆ, ದಂಡ

October 17, 2019

ಮೈಸೂರು, ಅ.16(ಎಸ್‍ಪಿಎನ್)- ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ ಇಬ್ಬರಿಗೆ ಮೈಸೂರು ವಿಶೇಷ ಪೋಕ್ಸೊ ನ್ಯಾಯಾಲಯ ಕ್ರಮವಾಗಿ 3 ಮತ್ತು ಒಂದು ವರ್ಷದ ಸೆರೆವಾಸ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

50 ವರ್ಷದ ಕಾಮುಕನಿಗೆ 3 ವರ್ಷ ಜೈಲು: ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ವ್ಯಕ್ತಿಗೆ ಮೈಸೂರಿನ ಪೋಕ್ಸೊ ವಿಶೇಷ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. 50 ವರ್ಷದ ಸುರೇಶ ಶಿಕ್ಷೆಗೆ ಗುರಿಯಾದ ಅಪರಾಧಿ. ಎರಡೂವರೆ ವರ್ಷದ ಹಿಂದೆ ಬಾಲಕಿಯು ತನ್ನ ತಂದೆಗೆ ಬೀಡಿ ತರಲು ಅಂಗಡಿಗೆ ತೆರಳುತ್ತಿದ್ದಾಗ, ಅಡ್ಡಗಟ್ಟಿದ ಸುರೇಶ, ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದರು. ಅಷ್ಟರಲ್ಲಿ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ರಕ್ಷಣೆ ಮಾಡಿ ಮನೆಗೆ ಕಳುಹಿಸಿದ್ದರು. ಗಾಬರಿಯಲ್ಲೇ ಮನೆಗೆ ತೆರಳಿದ ಬಾಲಕಿ, ನಡೆದ ವಿಚಾರವನ್ನು ತಾಯಿಗೆ ತಿಳಿಸಿದ್ದಾಳೆ. ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು, ಸುರೇಶ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷ ಸೆರೆವಾಸದ ತೀರ್ಪು ನೀಡಿದ್ದಾರೆ.

36 ವರ್ಷದ ಕಾಮುಕನಿಗೆ ಶಿಕ್ಷೆ: ಏಳು ವರ್ಷದ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ 36 ವರ್ಷದ ಗಿರೀಶನಿಗೆ ಮೈಸೂರಿನ ಪೆÇೀಕ್ಸೊ ವಿಶೇಷ ನ್ಯಾಯಾಲಯ ಒಂದು ವರ್ಷದ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಆರೋಪಿಯು ಬಾಲಕಿಗೆ ತನ್ನ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಎಸ್. ಜಯಶ್ರೀ ಅವರು ಗಿರೀಶನಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಬಿ.ಸಿ.ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು.

Translate »