ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕ್‍ನಿಂದ ಅತ್ಯಾಧುನಿಕ ಆಂಬುಲೆನ್ಸ್ ಕೊಡುಗೆ
ಮೈಸೂರು

ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕ್‍ನಿಂದ ಅತ್ಯಾಧುನಿಕ ಆಂಬುಲೆನ್ಸ್ ಕೊಡುಗೆ

March 9, 2019

ಮೈಸೂರು: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕೆನರಾ ಬ್ಯಾಂಕಿನಿಂದ 30 ಲಕ್ಷ ರೂ. ಮೌಲ್ಯದ ಸುಸಜ್ಜಿತ ಆಂಬುಲೆನ್ಸ್ ವಾಹನವನ್ನು ದೇಣಿಗೆಯಾಗಿ ನೀಡಲಾಯಿತು.

ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಿಜಯ ಕುಮಾರ್ ಅವರು ಶ್ರೀ ಜಯ ದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ ಅವರಿಗೆ ಇಂದು ಮಧ್ಯಾಹ್ನ ಕೆಆರ್‍ಎಸ್ ರಸ್ತೆಯ ಆಸ್ಪತ್ರೆ ಆವರಣದಲ್ಲಿ ಆಂಬುಲೆನ್ಸ್ ಕೀಲಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಜಯದೇವ ಆಸ್ಪತ್ರೆ ಸೇವೆಯನ್ನು ಗಮ ನಿಸಿದ ಕೆನರಾ ಬ್ಯಾಂಕ್ ನಿರಂತರ ಪ್ರೋತ್ಸಾಹ ನೀಡುತ್ತಿದ್ದು, ರೋಗಿಗಳಿಗೆ ಹೆಚ್ಚಿನ ಸೌಲಭ್ಯ ನೀಡಲು ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದರು.

ಆಂಬುಲೆನ್ಸ್ ಸಮರ್ಪಿಸಿದ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಡಿ. ವಿಜಯ ಕುಮಾರ್ ಅವರು ಪ್ರತಿಕ್ರಿಯಿಸಿ, ಸಿಎಸ್‍ಆರ್ ಯೋಜನೆಯಡಿ ತಮ್ಮ ಬ್ಯಾಂಕ್ ಹಲವು ಸಾಮಾಜಿಕ ಕಾರ್ಯಗಳಿಗೆ ನೆರವು ನೀಡುತ್ತಾ ಬಂದಿದ್ದು, ಡಾ. ಸಿ.ಎನ್.ಮಂಜು ನಾಥ ನೇತೃತ್ವದಲ್ಲಿ ಹೃದ್ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೇವೆ ಒದಗಿಸುತ್ತಿರುವ ಜಯದೇವ ಆಸ್ಪತ್ರೆಗೆ ಈ ಹಿಂದಿ ನಿಂದಲೂ ನೆರವು ನೀಡುತ್ತಾ ಬಂದಿದ್ದು, ತುರ್ತು ಚಿಕಿತ್ಸೆಗೆ ಐಸಿಯು ಒಳಗೊಂಡ ಸುಸಜ್ಜಿತ ಆಂಬುಲೆನ್ಸ್ ಅನ್ನು ಕೊಡುಗೆ ಯಾಗಿ ನೀಡಿದ್ದೇವೆ ಎಂದರು.

ರೋಗಿಗಳು ಹಾಗೂ ಸಂಬಂಧಿಕರಿಗೆ ಅನುಕೂಲವಾಗುವಂತೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕೌಂಟರ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕಿನ ಶಾಖೆಯನ್ನು ಆರಂಭಿಸುವುದಾಗಿಯೂ ವಿಜಯ ಕುಮಾರ್ ಇದೇ ವೇಳೆ ನುಡಿದರು.

ವೈದ್ಯರು, ಉಪಕರಣಗಳ ಕೊರತೆ ಇಲ್ಲ: ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮೈಸೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಇಲ್ಲ ಎಂದು ಡಾ. ಸಿ.ಎನ್.ಮಂಜುನಾಥ ಸ್ಪಷ್ಟಪಡಿಸಿದರು.

ಆಸ್ಪತ್ರೆಯಲ್ಲಿ 4 ಕ್ಯಾಥಲ್ಯಾಬ್‍ಗಳು, 4 ಆಪರೇಷನ್ ಥಿಯೇಟರ್‍ಗಳು, ಲ್ಯಾಬೊರೇಟರಿಗಳು ಹಾಗೂ 24 ಗಂಟೆ ಕೆಲಸ ಮಾಡುವ ಐಸಿಯುಗಳಿವೆ. ಕೈಗೆಟ ಕುವ ದರದಲ್ಲಿ ಹೃದ್ರೋಗಿಗಳಿಗೆ ಗುಣಾತ್ಮಕ ಚಿಕಿತ್ಸೆ ನೀಡುತ್ತಿರುವ ಏಕೈಕ ಆಸ್ಪತ್ರೆ ಈ ಸಂಸ್ಥೆ ಎಂದು ತಿಳಿಸಿದರು.

13 ಕಾರ್ಡಿಯಾಲಜಿಸ್ಟ್‍ಗಳು, ಐವರು ಕಾರ್ಡಿಯೋ ಥೊರಾಸಿಕ್ ಸರ್ಜನ್‍ಗಳು, ಐವರು ಅನೆಸ್ತೇಷಿಯಾಲಜಿಸ್ಟ್‍ಗಳು, 19 ಡ್ಯೂಟಿ ಡಾಕ್ಟರ್‍ಗಳು ಹಾಗೂ 400 ಸಪೋ ರ್ಟಿಂಗ್ ಸ್ಟಾಫ್ ಹೊಂದಿರುವ ಜಯ ದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕ್ವಾಲಿಟಿ, ಚಾರಿಟಿ, ಸಬ್ಸಿಡಿ ಹಾಗೂ ಮಾನವೀಯ ಸ್ಪರ್ಶದಿಂದ ಸೇವೆ ಒದಗಿಸಲಾಗುತ್ತಿದೆ ಎಂದು ನುಡಿದರು.
ಆಂಬುಲೆನ್ಸ್, ಐಸಿಯು, ರಕ್ತನಿಧಿ, ಇಸಿಜಿ, ಎಕೋ, ಟಿಎಂಟಿ, ಸಿಟಿ ಸ್ಕ್ಯಾನ್, ಓಪನ್ ಹಾರ್ಟ್ ಸರ್ಜರಿ, ಬೈಪಾಸ್ ಸರ್ಜರಿ, ವಾಲ್ವ್ ರೀಪ್ಲೇಸ್‍ಮೆಂಟ್, ವಾಸ್ಕುಲಾರ್ ಸರ್ಜರಿ, ಪ್ರಯೋಗಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿ ರುವ ಆಸ್ಪತ್ರೆಯಲ್ಲಿ ಇತ್ತೀಚೆಗೆ ಹೃದಯದ ರಂಧ್ರದಲ್ಲಿ ಕೀವು ತುಂಬಿಕೊಂಡಿದ್ದ ರೋಗಿಗೆ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಮಾಡಿ ಗುಣಮುಖಗೊಳಿಸಲಾಗಿದೆ ಎಂಬುದನ್ನು ಡಾ. ಮಂಜುನಾಥ ವಿವರಿಸಿದರು.

ಆಸ್ಪತ್ರೆ ಮೈಸೂರು ಘಟಕದ ಮುಖ್ಯಸ್ಥ ಡಾ.ಸದಾನಂದ, ಆರ್‍ಎಂಓ ಡಾ. ಪಾಂಡುರಂಗ, ಡಾ.ಹರ್ಷಬಸಪ್ಪ, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗೀತಾ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.

Translate »